ಶುಕ್ರವಾರ, ಮೇ 20, 2022
23 °C
ಆರಂಭವಾಗದ ವಂದನಾ ನಿರ್ಣಯ ಮೇಲಿನ ಚರ್ಚೆ l ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಪಟ್ಟು

ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಪಟ್ಟು | ರೈತ ಹೋರಾಟ: ಸದನಕ್ಕೆ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವು ಲೋಕಸಭೆಯಲ್ಲಿ ಪ್ರತಿಧ್ವನಿಸಿ, ಕಲಾಪವೇ ನಡೆಯದಂತೆ ಮಾಡಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಭಾರಿ ಗದ್ದಲ ಎಬ್ಬಿಸಿದ ಪರಿಣಾಮ ಲೋಕಸಭೆಯಲ್ಲಿ ಗುರುವಾರವೂ ಯಾವುದೇ ಕಲಾಪಕ್ಕೆ ಅವಕಾಶ ಸಿಗಲಿಲ್ಲ. 

ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಮಂಗಳವಾರ ಮಂಡಿಸಿದ್ದರು. ಆದರೆ, ಮೂರು ಕಾಯ್ದೆಗಳ ವಿರುದ್ಧ ರೈತರ ಹೋರಾಟದ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಹಾಗಾಗಿ, ವಂದನಾ ನಿರ್ಣಯದ ಮೇಲೆ ಒಂದೇ ಒಂದು ಭಾಷಣ ಆಗಿಲ್ಲ.

ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ವಂದನಾ ನಿರ್ಣಯದ ಚರ್ಚೆಗೆ ಶುಕ್ರವಾರ ಉತ್ತರಿಸ
ಬೇಕು. ಆದರೆ, ವಿರೋಧ ಪಕ್ಷಗಳ ಗಟ್ಟಿ ನಿಲುವು ಪ್ರಧಾನಿಯ ಉತ್ತರಕ್ಕೂ ಅಡ್ಡಿಯಾಗುವ ಲಕ್ಷಣ ಕಾಣಿಸುತ್ತಿದೆ. 

‘ಎಲ್ಲರೂ ನಿಮ್ಮ ನಿಮ್ಮ ಆಸನಗಳಿಗೆ ತೆರಳಿ, ಸದನ ನಡೆಸಲು ಸಹಕರಿಸಿ’ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಪದೇ ಪದೇ ಮಾಡಿದ ವಿನಂತಿ ಯಾವುದೇ ಫಲ ಕೊಡಲಿಲ್ಲ.

 ವಿರೋಧ ಪಕ್ಷದ ಸದಸ್ಯರು ನಿರಂತರವಾಗಿ ಘೋಷಣೆ ಕೂಗುತ್ತಲೇ ಇದ್ದರು. 

ವಂದನಾ ನಿರ್ಣಯದ ಚರ್ಚೆಗೆ ಅಡ್ಡಿಪಡಿಸುವುದಿಲ್ಲ ಎಂದು ಕಾಂಗ್ರೆಸ್‌ ಪಕ್ಷವು ಭರವಸೆ ನೀಡಿತ್ತು. ಆದರೆ, ಈ ನಿರ್ಧಾರದಿಂದ ಬುಧವಾರ ಹಿಂದೆ ಸರಿದಿದೆ. ಹಾಗಾಗಿ, ಲೋಕಸಭೆಯ ಕಲಾಪವು ಮುಂದೂಡಿಕೆ ಆಗುತ್ತಲೇ ಇದೆ. ರಾಜ್ಯಸಭೆಯಲ್ಲಿ ಚರ್ಚೆ ಆರಂಭವಾಗಿದೆ. 

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಸಮಾನಮನಸ್ಕ ಪಕ್ಷಗಳ ನಾಯಕರನ್ನು ಗುರುವಾರ ಭೇಟಿಯಾಗಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಚರ್ಚೆ ಆಗಬೇಕು ಎಂಬ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಕೋರಿದ್ದಾರೆ. 

ಸಂಸತ್ತಿನ ಸಂಪ್ರದಾಯದ ಪ್ರಕಾರ, ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪದ ಮೊದಲ ಕಾರ್ಯಸೂಚಿಯಾಗಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಸಬೇಕು. ಬಜೆಟ್‌ ಅಧಿವೇಶನದ ಮೊದಲ ದಿನವಾದ ಜನವರಿ 29ರಂದು ರಾಷ್ಟ್ರಪತಿ ಭಾಷಣ ಮಾಡಿದ್ದರು.

‘ಸರ್ಕಾರದ ಹೇಳಿಕೆ ಸತ್ಯದ ಅಪಹಾಸ್ಯ’:

ಮೂರು ಕೃಷಿ ಕಾಯ್ದೆಗಳ ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿರುವುದು ‘ಸತ್ಯದ ಅಪಹಾಸ್ಯ’ ಎಂದು ಕಾಂಗ್ರೆಸ್‌ ಸಂಸದ ಪಿ. ಚಿದಂಬರಂ ಹೇಳಿದ್ದಾರೆ. ಅಮೆರಿಕದ ಪಾಪ್‌ ತಾರೆ ರಿಯಾನಾ ಅವರು ರೈತರ ಹೋರಾಟಕ್ಕೆ ಬೆಂಬಲವಾಗಿ ಮಾಡಿದ ಟ್ವೀಟ್‌ಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯೆ ನೀಡಿ, ‘ಕಾಯ್ದೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ’ ಎಂದಿತ್ತು. 

ಕಾಯ್ದೆಗಳ ಬಗ್ಗೆ ಪೂರ್ಣ ಚರ್ಚೆ ನಡೆದಿಲ್ಲ ಎಂಬುದನ್ನು ರಾಜ್ಯಸಭೆಯ ದಾಖಲೆ ಮತ್ತು ವಿಡಿಯೊಗಳು ದೃಢಪಡಿಸುತ್ತವೆ. ಚರ್ಚೆಯ ಸಂದರ್ಭದಲ್ಲಿ ಸಂಸದರ ಮೈಕ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಮತವಿಭಜನೆಯ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ. 

‘ದಾಖಲೆಯಲ್ಲಿರುವ ವಿಚಾರಗಳನ್ನು ವಿದೇಶಾಂಗ ಸಚಿವಾಲಯವು ತಿರುಚುತ್ತದೆ ಎಂದಾದರೆ, ಈ ಸಚಿವಾಲಯದ ಹೇಳಿಕೆಗಳನ್ನು ಯಾರು ನಂಬುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ. 

ಮೊಳೆ ಕಿತ್ತಿಲ್ಲ: ಪೊಲೀಸರ ಸ್ಪಷ್ಟನೆ:

ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಪ್ರದೇಶದಲ್ಲಿ ‍ಪ್ರತಿಭಟನಕಾರರ ಚಲನವಲನ ನಿರ್ಬಂಧಿಸಲು ನೆಲದಲ್ಲಿ ನೆಡಲಾದ ಮೊಳೆಗಳನ್ನು ಬೇರೆ ಸ್ಥಳದಲ್ಲಿ ಅಳವಡಿಸುವುದಕ್ಕಾಗಿ ತೆಗೆಯಲಾಗಿದೆ ಅಷ್ಟೇ ಎಂದು ದೆಹಲಿ ಪೊಲೀಸ್‌ ಉಪ ಆಯುಕ್ತ ದೀಪಕ್‌ ಯಾದವ್‌ ತಿಳಿಸಿದ್ದಾರೆ. 

ಗಾಜಿಪುರ ಗಡಿಯಲ್ಲಿ ಅಳವಡಿಸಲಾಗಿದ್ದ ಮೊಳೆಗಳನ್ನು ಕೀಳುವ ದೃಶ್ಯಗಳಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಕಾಣಿಸಿಕೊಂಡಿದ್ದವು. ಪೊಲೀಸರು ಮೊಳೆಗಳನ್ನು ತೆಗೆಯುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆರಂಭವಾಗಿತ್ತು. ಆದರೆ, ಅದನ್ನು ಯಾದವ್‌ ಅಲ್ಲಗಳೆದಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳ ಭದ್ರತೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ. 

‘ಈಗ ಅವರು ಮೊಳೆಗಳನ್ನು ಕಿತ್ತು ಹಾಕಿದಂತೆಯೇ ಕಾಯ್ದೆಗಳನ್ನು ಕೂಡ ಕಿತ್ತು ಹಾಕಲಿದ್ದಾರೆ’ ಎಂದು ಪ್ರತಿಭಟನಕಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. 

ಸಂಸದರಿಗೆ ತಡೆ:

ಗಾಜಿಪುರದಲ್ಲಿ ರೈತರ ಪ್ರತಿಭಟನೆಯ ಸ್ಥಳಕ್ಕೆ ಹೋಗಲು ಯತ್ನಿಸಿದ 10 ಪಕ್ಷಗಳ 15 ಸಂಸದರನ್ನು ತಡೆಯಲಾಗಿದೆ. ಶಿರೋಮಣಿ ಅಕಾಲಿ ದಳದ ಸಂಸದೆ ಹರ್‌ಸಿಮ್ರತ್‌ ಕೌರ್‌ ಅವರು ಈ ಭೇಟಿಯನ್ನು ಆಯೋಜಿಸಿದ್ದರು. ಅವರ ಜತೆಗೆ ಡಿಎಂಕೆಯ ಕನಿಮೊಳಿ ಮತ್ತು ತಿರುಚ್ಚಿ ಶಿವ, ಟಿಎಂಸಿಯ ಸೌಗತಾ ರಾಯ್‌, ಎನ್‌ಸಿಪಿಯ ಸುಪ್ರಿಯಾ ಸುಳೆ ಮುಂತಾದವರು ಇದ್ದರು. ಪೊಲೀಸರು ಹಾಕಿರುವ ತಡೆಗಳನ್ನು ದಾಟಿ ರೈತರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಕೌರ್‌ ಅವರು ತಿಳಿಸಿದ್ದಾರೆ. 

ಆದರೆ, ಸಂಸದರನ್ನು ತಾವು ತಡೆದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ‘ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆಯ ಸ್ಥಳಕ್ಕೆ ಬರುತ್ತಿದ್ದಾರೆ. ಅವರನ್ನು ನಾವು ತಡೆದಿಲ್ಲ. ಸಂಸದರ ಗುಂಪನ್ನು ಬಹುಶಃ ದೆಹಲಿಯ ಭಾಗದಲ್ಲಿ ದೆಹಲಿ ಪೊಲೀಸರು ತಡೆದಿರಬಹುದು’ ಎಂದು ಉತ್ತರ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು