ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ಕೇಂದ್ರ ಸರ್ಕಾರದ ಅಸಡ್ಡೆಗೆ ಕಾಂಗ್ರೆಸ್ ಕಾರಣ ಎಂದ ಶಿವಸೇನಾ

Last Updated 26 ಡಿಸೆಂಬರ್ 2020, 10:33 IST
ಅಕ್ಷರ ಗಾತ್ರ

ಮುಂಬೈ: ರಾಷ್ಟ್ರಮಟ್ಟದ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈಗ ದುರ್ಬಲ ಮತ್ತು ಒಡೆದ ಮನೆಯಾಗಿದೆ ಎಂದು ಶಿವಸೇನಾ ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಶಿವಸೇನಾವೂ ಸೇರಿದಂತೆ ಎಲ್ಲ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಮೈತ್ರಿಕೂಟದ ಅಡಿಯಲ್ಲಿ ಒಂದಾಗಬೇಕು. ಪ್ರಬಲ ಪರ್ಯಾಯವೊಂದಕ್ಕಾಗಿ ಈ ಕ್ರಮಕ್ಕೆ ಮುಂದಾಗಬೇಕು ಎಂದು ಕರೆ ನೀಡಲಾಗಿದೆ.

ಅಧಿಕಾರದಲ್ಲಿ ಇರುವವರು ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಪರಿಣಾಮಕಾರಿಯಲ್ಲದ ಪ್ರತಿಪಕ್ಷವೂ ಸರ್ಕಾರದ ಈ ನಿರಾಸಕ್ತಿಗೆ ಕಾರಣವಾಗಿದೆ ಎಂದು ಸೇನಾ ಅಭಿ‍ಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರವನ್ನು ದೂರುವ ಬದಲು ಪ್ರಮುಖ ಪ್ರತಿಪಕ್ಷವು ತನ್ನ ನಾಯಕತ್ವ ಸಮಸ್ಯೆ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು ಎಂದೂ ಸೇನಾ ಹೇಳಿದೆ.

‘ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಆಡಳಿತದಲ್ಲಿರುವವರು ಈ ಪ್ರತಿಭಟನೆಯ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ತೋರಿದ್ದಾರೆ. ಸರ್ಕಾರದ ಈ ಉದಾಸೀನಕ್ಕೆ ದುರ್ಬಲ ಮತ್ತು ಒಡೆದ ಮನೆಯಾಗಿರುವ ಪ್ರತಿಪಕ್ಷವೂ ಕಾರಣ’ ಎಂದು ಸೇನಾ ಹೇಳಿದೆ.

‘ರಾಹುಲ್ ಗಾಂಧಿ ಅವರು ವೈಯಕ್ತಿಕವಾಗಿ ಉತ್ತಮ ಹೋರಾಟ ಮಾಡುತ್ತಿದ್ದಾರೆ. ಆದರೆ ಏನೋ ಕೊರತೆ ಇದೆ. ಯುಪಿಎ ಮೈತ್ರಿಕೂಟದ ಸದ್ಯದ ಸ್ಥಿತಿ ಸ್ವಯಂಸೇವಾ ಸಂಸ್ಥೆಯಂತಾಗಿದೆ (ಎನ್‌ಜಿಒ). ಯುಪಿಎಯ ಇತರ ಪಕ್ಷಗಳೂ ರೈತರ ಪ್ರತಿಭಟನೆಯನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಏನು ಮಾಡಬೇಕು ಎಂಬ ಕುರಿತು ಇವರಲ್ಲಿ ಸ್ಪಷ್ಟತೆ ಇದ್ದಂತಿಲ್ಲ’ ಎಂದು ಉಲ್ಲೇಖಿಸಲಾಗಿದೆ.

‘ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರದ್ದು ರಾಷ್ಟ್ರಮಟ್ಟದಲ್ಲಿ ಸ್ವತಂತ್ರ ವರ್ಚಸ್ಸು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ದೇಶದ ಪ್ರತಿಪಕ್ಷವು ಅವರ ಜತೆ ನಿಲ್ಲಬೇಕಿದೆ. ಮಮತಾ ಅವರು ಪವಾರ್ ಅವರನ್ನು ಮಾತ್ರ ಸಂಪರ್ಕಿಸಿದ್ದು, ಅವರು ಬಂಗಾಳಕ್ಕೆ ತೆರಳಲಿದ್ದಾರೆ. ಆದರೆ, ಇದು ಕಾಂಗ್ರೆಸ್‌ ನೇತೃತ್ವದಲ್ಲಿ ಆಗಬೇಕಿತ್ತು’ ಎಂದು ಸೇನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT