ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜಂತರ್ ಮಂತರ್‌ನತ್ತ 200 ರೈತರು; ಸಿಂಘು ಗಡಿಯಲ್ಲಿ ಭದ್ರತೆ ಹೆಚ್ಚಳ

ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆ ವಿರೋಧಿಸಿ ಎಂಟು ತಿಂಗಳಿಂದ ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವತ್ತಿನಿಂದ ನವದೆಹಲಿಯ ಸಂಸತ್ತಿನ ಸಮೀಪ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದೆ. ಗರಿಷ್ಠ 200 ಮಂದಿ ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ನಿತ್ಯವೂ ಸಂಯುಕ್ತ ಕಿಸಾನ್‌ ಮೋರ್ಚಾದ 200 ಜನ ರೈತರು ಬಸ್‌ನಲ್ಲಿ ಜಂತರ್‌ ಮಂತರ್‌ಗೆ ತೆರಳಿ ಪ್ರತಿಭಟನೆ ನಡೆಸಲು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅನುಮತಿ ನೀಡಿರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ನ ಮುಖಂಡ ರಾಕೇಶ್‌ ಟಿಕಾಯತ್‌ ಖಚಿತ ಪಡಿಸಿದ್ದಾರೆ. ಆಗಸ್ಟ್‌ 9ರ ವರೆಗೂ ದಿನವೂ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಹಲವು ಸ್ಥಳಗಳಿಂದ ರೈತರು ಸಿಂಘು ಗಡಿಯ ಸಮೀಪ ಸೇರಲಿದ್ದು, ಅಲ್ಲಿಂದ ಜಂತರ್‌ ಮಂತರ್‌ನತ್ತ ಸಾಗಲಿದ್ದಾರೆ. ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೂ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಿಂಘು ಗಡಿ ಭಾಗ ಮತ್ತು ಜಂತರ್‌ ಮಂತರ್‌ ಎರಡೂ ಕಡೆ ಭದ್ರತೆ ಹೆಚ್ಚಿಸಲಾಗಿದೆ.

'ಭಾರತೀಯ ಕಿಸಾನ್‌ ಯೂನಿಯನ್‌ ಕಡೆಯಿಂದ ಎಂಟು ಮಂದಿ ರೈತರು ಸಿಂಘು ಗಡಿಗೆ ಹೋಗಿ ಅದಲ್ಲಿಂದ ಜಂತರ್‌ ಮಂತರ್‌ಗೆ ತೆರಳಿದ್ದೇವೆ. ಅಲ್ಲಿ ಕಿಸಾನ್‌ ಸಂಸತ್‌ ನಡೆಸಲಿದ್ದೇವೆ' ಎಂದು ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಕೋವಿಡ್‌–19 ನಿಯಮಗಳನ್ನು ಅನುಸರಿಸುವುದು ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವ ಷರುತ್ತು ವಿಧಿಸಲಾಗಿದೆ. ಸಂಸತ್‌ ಅಧಿವೇಶನ ನಡೆಯುವವರೆಗೂ (ಆಗಸ್ಟ್‌ 13) ನಿತ್ಯವೂ 200 ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ. ಆದರೆ, ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಸ್ಟ್‌ 9ರ ವರೆಗೂ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ.

ಗಣರಾಜ್ಯೋತ್ಸವದ ದಿನ (ಜ.26) ರೈತರು ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದ ಸಂದರ್ಭದಲ್ಲಿ ಪ್ರತಿಭಟನೆಯು ಹಿಂಸಾರೂಪ ಪಡೆದಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿತ್ತು. ಆ ಘಟನೆಯ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿಭಟನೆಗೆ ಕರ್ನಾಟಕದ ರೈತರೂ ಕೈಜೋಡಿಸಿದ್ದು, ಗಾಜಿಪುರ ಗಡಿಯಲ್ಲಿ ಕರ್ನಾಟಕದ ರೈತರಿಗಾಗಿ ಪ್ರತ್ಯೇಕ ಟೆಂಟ್‌ ಹಾಕಲಾಗಿದೆ.

2020ರ ನವೆಂಬರ್‌ನಿಂದ ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ ಗಡಿ ಭಾಗಗಳಲ್ಲಿ ನೂರಾರು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನಾಕಾರರು ಮತ್ತು ಸರ್ಕಾರದ ನಡುವೆ ಈಗಾಗಲೇ 11 ಸುತ್ತಿನ ಮಾತುಕತೆ ನಡೆದಿದ್ದರೂ ಫಲಪ್ರದವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT