ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಕಬ್ಬಿನ ದರ ಹೆಚ್ಚಳ, ಬಾಕಿ ಪಾವತಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಸತತ ಎರಡನೇ ದಿನವೂ ಅಸ್ತವ್ಯಸ್ತಗೊಂಡ ರೈಲು, ರಸ್ತೆ ಸಂಚಾರ
Last Updated 21 ಆಗಸ್ಟ್ 2021, 11:20 IST
ಅಕ್ಷರ ಗಾತ್ರ

ಚಂಡೀಗಡ: ಕಬ್ಬಿನ ದರ ಹೆಚ್ಚಳ ಮತ್ತು ಕಬ್ಬಿನ ಬಾಕಿ ಮೊತ್ತ ಪಾವತಿಸುವಂತೆ ಆಗ್ರಹಿಸಿ ರೈತರು ಜಲಂಧರ್‌ನಲ್ಲಿ ರೈಲು ಹಳಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪರಿಣಾಮ ಶನಿವಾರ ರೈಲು ಸಂಚಾರ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

‘ಸುಮಾರು 50 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಅಲ್ಲದೆ 54 ರೈಲುಗಳನ್ನು ಇತರ ಮಾರ್ಗಗಳತ್ತ ಕಳುಹಿಸಲಾಯಿತು ಅಥವಾ ಅಲ್ಪಾವಧಿಗೆ ನಿಲ್ಲಿಸಲಾಯಿತು’ ಎಂದು ಫಿರೋಜಪುರ ವಿಭಾಗದ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಬ್ಬಿನ ಬಾಕಿ ಮೊತ್ತ ಪಾವತಿ ಹಾಗೂ ಕಬ್ಬಿನ ಬೆಲೆ ಏರಿಕೆಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುವಂತೆ ಪಂಜಾಬ್‌ ಸರ್ಕಾರವನ್ನು ಒತ್ತಾಯಿಸಿ ಅನೇಕ ರೈತರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಜಲಂಧರ್ ಜಿಲ್ಲೆಯ ಧನೋವಲಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಟ್ಟಿದ್ದಾರೆ.

ರೈತರ ಪ್ರತಿಭಟನೆಯಿಂದ ಜಲಂಧರ್‌, ಅಮೃತಸರ, ಪಠಾಣ್‌ಕೋಟ್‌ ಮತ್ತು ಇತರ ಪ್ರದೇಶಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಸ್ಥಳೀಯ ಆಡಳಿತವು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿದೆ.

ಪಂಜಾಬ್‌ ಸರ್ಕಾರ ಉಳಿಸಿಕೊಂಡಿರುವ ₹200ರಿಂದ 250 ಕೋಟಿ ಕಬ್ಬಿನ ಬಾಕಿಯನ್ನು ರೈತರಿಗೆ ಪಾವತಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT