ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹೆಚ್ಚುತ್ತಿರುವ ಬೆಂಬಲ, ದೆಹಲಿ ಸಂಪರ್ಕಿಸುವ ಐದು ಪ್ರಮುಖ ರಸ್ತೆಗಳು ಬಂದ್

ಬೇಡಿಕೆ ಈಡೇರುವವರೆಗೆ ಕದಲುವುದಿಲ್ಲ ಎಂದ ರೈತರು
Last Updated 2 ಡಿಸೆಂಬರ್ 2020, 22:15 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಏಳು ದಿನಗಳನ್ನು ಪೂರೈಸಿದೆ. ಪ್ರತಿಭಟನಾನಿರತ ರೈತರ ಸಂಖ್ಯೆಯು ಬುಧವಾರ ಇನ್ನಷ್ಟು ಏರಿಕೆಯಾಗಿದೆ. ‘ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವಿಲ್ಲಿಂದ ಕದಲುವುದಿಲ್ಲ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಗಾಜಿಪುರದಲ್ಲಿ ಪ್ರತಿಭಟನೆಯು ಇನ್ನಷ್ಟು ತೀವ್ರವಾಗಿದ್ದರಿಂದ ದೆಹಲಿ–ಉತ್ತರಪ್ರದೇಶ ಗಡಿಯನ್ನು ಮುಚ್ಚಲಾಗಿದೆ. ಫಿರೋಜಾಬಾದ್‌, ಮೀರಠ್‌, ನೋಯ್ಡಾ ಹಾಗೂ ಇಟಾವಾಗಳಿಂದ ಹೆಚ್ಚಿನ ರೈತರು ಬಂದು ಪ್ರತಿಭಟನಕಾರರನ್ನು ಸೇರಿದ್ದರಿಂದ ದೆಹಲಿ– ನೋಯ್ಡಾ ಸಂಪರ್ಕಿಸುವ ಎಲ್ಲಾ ಗಡಿಗಳನ್ನೂ ಮುಚ್ಚಲಾಗಿದೆ. ಇದರಿಂದಾಗಿ ರಾಜಧಾನಿಯನ್ನು ಸಂಪರ್ಕಿಸುವ ಐದು ರಸ್ತೆಗಳು ಸಂಪೂರ್ಣವಾಗಿ ಬಂದ್‌ ಆಗಿವೆ. ಉಳಿದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅತಿಯಾಗಿದ್ದು ಪ್ರಯಾಣಿಕರು ಭಾರಿ ಸಂಕಷ್ಟ ಎದುರಿಸುವಂತಾಗಿದೆ.

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಯತ್ನ: (ಚಂಡೀಗಡ ವರದಿ): ಹರಿಯಾಣದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲುಬುಧವಾರ ಪ್ರಯತ್ನಿಸಿದರು.

ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರ ಮನೆಯತ್ತ ಹೊರಟಿದ್ದ ಕಾರ್ಯಕರ್ತರನ್ನು ತಡೆಯಲು ಮೂರು ಕಿ.ಮೀ. ದೂರದಲ್ಲೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ ಪ್ರತಿಭಟನಕಾರರಲ್ಲಿ ಕೆಲವರು ಬ್ಯಾರಿಕೇಡ್‌ಗಳನ್ನು ಸರಿಸಿ ಮುಖ್ಯಮಂತ್ರಿಯ ಮನೆಯ ಸಮೀಪಕ್ಕೆ ಬರಲು ಯಶಸ್ವಿಯಾದರು. ಇಲ್ಲಿ ಪೊಲೀಸರು ಅವರ ಮೇಲೆ ಜಲಫಿರಂಗಿಗಳನ್ನು ಬಳಸಿದರು. ಪ್ರತಿಭಟನಕಾರರಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ‘ಪ್ರತಿಭಟನೆ ನಡೆಸಲು ದೆಹಲಿಯತ್ತ ಹೋಗುತ್ತಿರುವ ರೈತರನ್ನು ತಡೆಯುವ ಕೆಲಸವನ್ನು ಹರಿಯಾಣ ಪೊಲೀಸರು ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ’ ಎಂದು ಯುವ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಹೇಳಿದರು.

ಜೆಜೆಪಿಗೆ ಸವಾಲು: ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಇಬ್ಬರು ಪಕ್ಷೇತರ ಶಾಸಕರು ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಈಗಾಗಲೇ ಹಿಂತೆಗೆದುಕೊಂದಿದ್ದಾರೆ. ಪಕ್ಷೇತರ ಶಾಸಕರ ನಡೆಯನ್ನು ಸ್ವಾಗತಿಸಿರುವ ಕಾಂಗ್ರೆಸ್‌ ಮುಖಂಡ ರಣದೀಪ್‌ಸಿಂಗ್‌ ಸುರ್ಜೇವಾಲ, ರೈತರಿಗೆ ಬೆಂಬಲ ಸೂಚಿಸಿ ಸರ್ಕಾರದಿಂದ ಹೊರಬರುವಂತೆ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮುಖಂಡ ದುಷ್ಯಂತ ಚೌಟಾಲಾ ಅವರಿಗೆ ಸವಾಲು ಹಾಕಿದ್ದಾರೆ.

90 ಶಾಸಕರ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಹಾಗೂ ಕಾಂಗ್ರೆಸ್‌ 31 ಶಾಸಕರನ್ನು ಹೊಂದಿದೆ. ಜೆಜೆಪಿಯ 10 ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.

ಕೇಜ್ರಿವಾಲ್‌ ಆರೋಪ: ‘ದೆಹಲಿಯ ಮೈದಾನಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ಅವಕಾಶ ನಿರಾಕರಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನನ್ನ ಮೇಲೆ ಅಸಮಾಧಾನಗೊಂಡಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ನಗರದ ಮೈದಾನಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ಅನುಮತಿ ಕೋರಿ ಪೊಲೀಸ್‌ ಇಲಾಖೆ ಮಾಡಿದ್ದ ಮನವಿಯನ್ನು ಎಎಪಿ ಸರ್ಕಾರ ಕಳೆದ ವಾರ ತಿರಸ್ಕರಿಸಿತ್ತು.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ವಿರುದ್ಧವೂ ಹರಿಹಾಯ್ದ ಕೇಜ್ರಿವಾಲ್‌, ‘ಕೃಷಿ ಕಾನೂನುಗಳನ್ನು ವಿರೋಧಿಸಲು ಅಮರಿಂದರ್‌ ಸಿಂಗ್‌ ಅವರಿಗೆ ಹಲವು ಅವಕಾಶಗಳಿದ್ದವು. ಆದರೆ ಅವರು ಅವನ್ನು ಬಳಸಿಕೊಳ್ಳಲಿಲ್ಲ. ‘ಕ್ಯಾಪ್ಟನ್‌ ಸಾಹೇಬರು’ ಈಗ ಬಿಜೆಪಿಯ ಭಾಷೆಯನ್ನು ಆಡುತ್ತಿದ್ದಾರೆ. ನನ್ನ ವಿರುದ್ಧ ಕೊಳಕು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.

ಸಚಿವರ ಜತೆ ಶಾ ಸಭೆ

ಸರ್ಕಾರ ಹಾಗೂ ಪ್ರತಿಭಟನಾನಿರತ ರೈತ ಪ್ರತಿನಿಧಿಗಳ ಮಧ್ಯೆ ಎರಡನೇ ಸುತ್ತಿನ ಮಾತುಕತೆಯು ಗುರುವಾರ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಗೃಹಸಚಿವ ಅಮಿತ್‌ ಶಾ ಅವರು ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಹಾಗೂ ರೈಲ್ವೆ ಸಚಿವ ಪೀಯೂಷ್‌‌ ಗೋಯಲ್‌ ಅವರ ಜತೆ ಬುಧವಾರ ಮಾತುಕತೆ ನಡೆಸಿದ್ದಾರೆ. ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ರೈತರು ಎತ್ತಿರುವ ಪ್ರಶ್ನೆಗಳು ಹಾಗೂ ವ್ಯಕ್ತಪಡಿಸಿರುವ ಕಳವಳಗಳ ಬಗ್ಗೆ ಸರ್ಕಾರವು ಹೇಗೆ ರಚನಾತ್ಮಕ ಪ್ರತಿಕ್ರಿಯೆ ನೀಡಬಹುದು ಎಂಬ ಬಗ್ಗೆ ಸಚಿವರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

‘ಅಧಿವೇಶನ ಕರೆಯಿರಿ’

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ 32 ರೈತ ಸಂಘಟನೆಗಳ ಪ್ರತಿನಿಧಿಗಳು ಸಹ ಬುಧವಾರ ಸಭೆ ಆಯೋಜಿಸಿ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವ ತೀರ್ಮಾನ ಕೈಗೊಂಡಿದ್ದಾರೆ. ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ರಾಕೇಶ್‌ ಟಿಕಾಯತ್‌ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಧ್ಯಮಗೋಷ್ಠಿ ನಡೆಸಿದ ರೈತ ಮುಖಂಡರು, ‘ಕೇಂದ್ರ ಸರ್ಕಾರವು ವಿಶೇಷ ಅಧಿವೇಶನ ಕರೆದು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿ, ಬೇಡಿಕೆಗಳನ್ನು ಈಡೇರಿಸದಿದ್ದರೆ ದೆಹಲಿಯನ್ನು ಸಂಪರ್ಕಿಸುವ ಇತರ ರಸ್ತೆಗಳನ್ನೂ ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂಘಟನೆ ಒಡೆಯುವ ಸಂಚು

ರೈತ ಪ್ರತಿನಿಧಿಗಳ ಸಣ್ಣ ಸಮಿತಿಯನ್ನು ರಚಿಸಿಕೊಂಡು ಮಾತುಕತೆಗೆ ಬರುವಂತೆ ಕೆಂದ್ರ ಸರ್ಕಾರವು ನೀಡಿದ್ದ ಸಲಹೆಯನ್ನು ರೈತರು ಮಂಗಳವಾರ ತಿರಸ್ಕರಿಸಿದ್ದರು.

ಬುರಾಡಿ ಮೈದಾನಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಲು ಸರ್ಕಾರ ಮಾಡಿರುವ ಮನವಿಯನ್ನು ಸ್ವೀಕರಿಸುವಂತೆ ಸಲಹೆ ನೀಡಿದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಮುಖಂಡ ವಿ.ಎಂ. ಸಿಂಗ್‌ ಅವರನ್ನು ರೈತ ಸಂಘಟನೆಗಳು ದೂರ ಇರಿಸಿವೆ.

ಎಐಕೆಎಸ್‌ಸಿಸಿಯ ಇನ್ನೊಬ್ಬ ಮುಖಂಡ ಯೋಗೇಂದ್ರ ಯಾದವ್‌ ಬಗ್ಗೆಯೂ ರೈತ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ. ‘ಸರ್ಕಾರದ ಜತೆಗೆ ಮಾತುಕತೆ ನಡೆಸುವ ರೈತ ಪ್ರತಿನಿಧಿಗಳಲ್ಲಿ ನಾನು ಇರುವುದು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ನಾನೇ ಹಿಂದೆಸರಿದಿದ್ದೇನೆ’ ಎಂದು ಯಾದವ್‌ ಹೇಳಿಕೊಂಡಿದ್ದಾರೆ.

ಸಚಿವರ ತಂಡವು ಭಾರತೀಯ ಕಿಸಾನ್‌ ಯೂನಿಯನ್‌ನ ಟಿಕಾಯತ್‌ ಬಣದ ಪ್ರತಿನಿಧಿಗಳ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದೂ ವರದಿಯಾಗಿದೆ.

‘ಸರ್ಕಾರವು ರೈತ ಸಂಘಟನೆಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನ ಈಡೇರಲು ಬಿಡಲಾರೆವು. ಹೊಸ ಕಾನೂನುಗಳು ರದ್ದಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ರೈತಮುಖಂಡ ದರ್ಶನ್‌ಪಾಲ್‌ ಹೇಳಿದ್ದಾರೆ.

ಮಾಳವೀಯ ಟ್ವೀಟ್‌ ‘ತಿರುಚಿದ ವರದಿ’: ಟ್ವಿಟರ್

ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ನವೆಂಬರ್ 28ರಂದು ಮಾಡಿದ್ದ ಟ್ವೀಟ್‌ ಅನ್ನು, ‘ತಿರುಚಿದ ವರದಿ’ (ಮ್ಯಾನಿಪುಲೇಟೆಡ್ ಮೀಡಿಯಾ) ಎಂದು ಟ್ವಿಟರ್‌ ಹೇಳಿದೆ.

‘ದೆಹಲಿ ಚಲೊ’ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸುತ್ತಿರುವ ಚಿತ್ರವನ್ನು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಯಾಗಿ ಅಮಿತ್ ಮಾಳವೀಯ ಅವರು ನವೆಂಬರ್ 28ರಂದು ಫ್ಯಾಕ್ಟ್‌ಚೆಕ್ ಪೋಸ್ಟ್ ಅನ್ನು ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿ ಅವರು ಟ್ವೀಟ್‌ ಮಾಡಿದ್ದ ಚಿತ್ರ ಮತ್ತು ಆ ಚಿತ್ರಕ್ಕೆ ಸಂಬಂಧಿಸಿದ ವಿಡಿಯೊವನ್ನು ಮಾಳವೀಯ ಒಟ್ಟಿಗೇ ಟ್ವೀಟ್ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಬೀಸುವ ಲಾಠಿ ರೈತನಿಗೆ ತಾಗುವುದಿಲ್ಲ. ಚಿತ್ರ ನಕಲಿ, ಅದರ ಅಸಲಿಯತ್ತು ಈ ವಿಡಿಯೊದಲ್ಲಿದೆ ಎಂದು ಅವರು ವಿವರಣೆ ನೀಡಿದ್ದರು.

ಈ ಟ್ವೀಟ್‌ನಲ್ಲಿ ಮಾಳವೀಯ ಅವರು ಬಳಸಿರುವ ವಿಡಿಯೊವನ್ನು ತಿರುಚಲಾಗಿದೆ ಎಂದು ಟ್ವಿಟರ್ ಹೇಳಿದೆ. ಈ ವಿಚಾರ ಬಹಿರಂಗವಾದ ನಂತರ ಟ್ವಿಟರ್‌ನಲ್ಲಿ ಭಾರಿ ವಾಗ್ವಾದ ನಡೆದಿದೆ. ‘ಫ್ಯಾಕ್ಟ್‌ಚೆಕ್‌ ಅನ್ನೇ ಸುಳ್ಳು ಎಂದು ಟ್ವಿಟರ್‌ ಹೇಳುತ್ತಿದೆ’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಮೇಲೆ ಪೊಲೀಸರು ಲಾಠಿ ಬೀಸುವ ದೃಶ್ಯವಿರುವ ಪೂರ್ಣವಿಡಿಯೊವನ್ನು ಹಲವರು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದ ರೈತನಿಗೆ ಲಾಠಿ ತಾಗುವ ದೃಶ್ಯ ಆ ವಿಡಿಯೊದಲ್ಲಿ ಇದೆ. ಆದರೆ ಚಿತ್ರದಲ್ಲಿ ಇರುವ ಪೊಲೀಸ್ ಸಿಬ್ಬಂದಿ ಬೀಸುವ ಲಾಠಿ ರೈತನಿಗೆ ತಗಲುವುದಿಲ್ಲ. ಬದಲಿಗೆ ಅದಕ್ಕೂ ಮುನ್ನ ಬೇರೊಬ್ಬ ಪೊಲೀಸ್ ಸಿಬ್ಬಂದಿ ಬೀಸುವ ಲಾಠಿ ರೈತನಿಗೆ ತಾಗುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಚಿತ್ರವನ್ನು ಸೆರೆಹಿಡಿದಿದ್ದ ಪಿಟಿಐ ಛಾಯಾಗ್ರಾಹಕ ಸಹ ಇದನ್ನು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT