ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ

ವಿಶೇಷ ಅಧಿವೇಶನ ಕರೆಯುವಂತೆ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ l ಎಂಎಸ್‌ಪಿ ಬಗ್ಗೆ ಹೊಸ ಚರ್ಚೆ ಇಲ್ಲ: ಸರ್ಕಾರ
Last Updated 24 ಡಿಸೆಂಬರ್ 2020, 20:57 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ‘ಕೃಷಿ ಸುಧಾರಣಾ ಕಾಯ್ದೆ’ಗಳನ್ನು ರದ್ದುಮಾಡುವಂತೆ ಆಗ್ರಹಿಸಿ ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್‌ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಶುಕ್ರವಾರಕ್ಕೆ 30 ದಿನಗಳಾಗುತ್ತವೆ. ಈ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶದ ಹಲವೆಡೆಯಿಂದ ಹೊರಟಿದ್ದ ರೈತರ ಟ್ರ್ಯಾಕ್ಟರ್ ಮೆರವಣಿಗೆ ಗುರುವಾರ ಗಾಜಿಪುರ್ ಗಡಿಯನ್ನು ತಲುಪಿದೆ.

ಈ ಕಾಯ್ದೆಗಳನ್ನು ರದ್ದುಪಡಿಸಲು ಸಂಸತ್ತಿನ ವಿಶೇಷ ಜಂಟಿ ಅಧಿವೇಶನವನ್ನು ಕರೆಯಬೇಕು ಎಂದು ಕಾಂಗ್ರೆಸ್‌ ಪಕ್ಷದ ನಿಯೋಗವು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದೆ. ದೆಹಲಿಯಲ್ಲಿನ ಕಾಂಗ್ರೆಸ್‌ ಕಚೇರಿಯಿಂದ ಹೊರಟು, ರಾಷ್ಟ್ರಪತಿ ಭವನವನ್ನು ತಲುಪುವಷ್ಟರಲ್ಲಿ ಪೊಲೀಸರು ಕಾಂಗ್ರೆಸ್‌ನ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದರು. ರಾಷ್ಟ್ರಪತಿಯನ್ನು ಭೇಟಿ ಮಾಡಲು ಕೆಲವು ನಾಯಕರಿಗಷ್ಟೇ ಅವಕಾಶ ನೀಡಲಾಯಿತು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ಮತ್ತುಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಮಾತ್ರ ರಾಷ್ಟ್ರಪತಿಗಳ ಭೇಟಿಗೆ ಬಿಡಲಾಯಿತು. ಈ ಕಾಯ್ದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಎರಡು ಕೋಟಿ ರೈತರು ಸಹಿ ಮಾಡಿದ್ದ ಮನವಿ ಪತ್ರವನ್ನು ಕಾಂಗ್ರೆಸ್‌ ನಾಯಕರು ರಾಷ್ಟ್ರಪತಿಗೆ ನೀಡಿದರು.

ಈ ನಾಯಕರ ಜತೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಸ್‌ನಲ್ಲಿ ದೂರದ ಸ್ಥಳಕ್ಕೆ ಕರೆದುಕೊಂಡು ಹೋದರು. ಕೆಲವು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ರಾಷ್ಟ್ರಪತಿಯನ್ನು ಭೇಟಿ ಮಾಡಲು ಬಿಡದೇ ಇದ್ದುದ್ದಕ್ಕೆ ಪೊಲೀಸರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

‘ಈ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ. ಪ್ರಜಾಪ್ರಭುತ್ವ ನಾಶವಾಗಿದೆ. ಪ್ರಜಾಪ್ರಭುತ್ವ ಇದೆ ಎಂದು ಯಾರಾದರೂ ಹೇಳುವುದಾದರೆ, ಅದು ಇರುವುದು ಅವರ ಕಲ್ಪನೆಯಲ್ಲಿ ಮಾತ್ರ’ ಎಂದು ರಾಹುಲ್ ಗಾಂಧಿ ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಅವರ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಅದು ವಿರೋಧ ಪಕ್ಷದವರೇ ಆಗಲೀ, ರೈತರೇ ಆಗಿರಲಿ ಅಥವಾ ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಅವರೇ ಆಗಿದ್ದರೂ, ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಈಗ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರನ್ನೂ, ಬಿಜೆಪಿ ನಾಯಕರು ಭಯೋತ್ಪಾದಕರು ಎನ್ನುತ್ತಿದ್ದಾರೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

‘ಮೋದಿ ಅಸಮರ್ಥ ವ್ಯಕ್ತಿ’
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಅಸಮರ್ಥ ವ್ಯಕ್ತಿ ಎಂಬುದನ್ನು ದೇಶದ ಜನರು, ಯುವಕರು ಅರ್ಥಮಾಡಿಕೊಳ್ಳಬೇಕಿದೆ. ಈ ಅಸಮರ್ಥ ವ್ಯಕ್ತಿ ತನ್ನ 4-5 ಬಂಡವಾಳಶಾಹಿ ಗೆಳೆಯರ ಮಾತನ್ನಷ್ಟೇ ಕೇಳುತ್ತಾರೆ. ಆ ಗೆಳೆಯರು ಹೇಳುವುದನ್ನು ಮಾತ್ರ ಮಾಡುತ್ತಾರೆ.ಮೋದಿ ಅವರು ತಮ್ಮ ಈ ಗೆಳೆಯರಿಗಾಗಿ ಹಣ ಮಾಡುತ್ತಿದ್ದಾರೆ. ಬಡವರ ಸಂಪತ್ತನ್ನು ಈ ಗೆಳೆಯರಿಗೆ ವರ್ಗಾಯಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಈ ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ರೈತರೇ ಈ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವುದನ್ನು ಇಡೀ ದೇಶವೇ ನೋಡುತ್ತಿದೆ. ಈ ಕಾಯ್ದೆಗಳು ದೇಶದ ಕೃಷಿ ವ್ಯವಸ್ಥೆಯನ್ನು ಧ್ವಂಸ ಮಾಡುತ್ತವೆ. ಇವುಗಳನ್ನು ಈಗಲೇ ರದ್ದುಪಡಿಸದೇ ಇದ್ದರೆ, ದೇಶವೇ ಹಾಳಾಗುತ್ತದೆ. ಈ ಹೋರಾಟದಲ್ಲಿ ವಿರೋಧ ಪಕ್ಷಗಳು ರೈತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತವೆ ಎಂದು ರಾಹುಲ್ ಹೇಳಿದರು.

ಮತ್ತೆ ಪತ್ರ ಬರೆದ ಸರ್ಕಾರ
ಕೃಷಿ ಸುಧಾರಣಾ ಕಾಯ್ದೆಗಳ ಬಗ್ಗೆ ಚರ್ಚಿಸಲು ಬರುವಂತೆ ಕೋರಿ ರೈತ ಮುಖಂಡರಿಗೆ ಕೇಂದ್ರ ಸರ್ಕಾರ ಮತ್ತೆ ಪತ್ರ ಬರೆದಿದೆ. ಆದರೆ, ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಹೊಸ ಬೇಡಿಕೆಗಳ ಬಗ್ಗೆ ಚರ್ಚೆ ಖಂಡಿತಾ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

‌‘ಪ್ರತಿಭಟನೆಯನ್ನು ನಿಲ್ಲಿಸುವ ಉದ್ದೇಶದಿಂದ ಮುಕ್ತ ಮನಸ್ಸಿನಿಂದ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರವು ಮಾತುಕತೆ ನಡೆಸಲು ಸಿದ್ಧವಿದೆ. ನೀವು ದಿನಾಂಕ, ಸಮಯವನ್ನು ನಿಗದಿ ಮಾಡಿ. ನಿಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ’ ಎಂದು ಕೃಷಿ ಸಚಿವಾಲಯದ ಜಂಟಿ ನಿರ್ದೇಶಕ ವಿವೇಕ್ ಅಗರ್ವಾಲ್ ಅವರು ರೈತರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. 40 ರೈತ ನಾಯಕರಿಗೆ ಸರ್ಕಾರವು ಈ ಪತ್ರ ಬರೆದಿದೆ.

ದಿನದ ಬೆಳವಣಿಗೆ
*ಪಂಜಾಬ್‌ನ ಕೃಷಿಕಾರ್ಮಿಕ ಸುಖಬಿಲ್ ಬಾಜ್ವಾ ಎಂಬುವವರು 370 ಕಿ.ಮೀ. ಸೈಕಲ್ ತುಳಿದುಕೊಂಡು ಗುರುವಾರ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೂಡಿಕೊಂಡಿದ್ದಾರೆ.
* ಕೇಂದ್ರದ ನೂತನ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲು ಅನುಮತಿ ನೀಡುವಂತೆ ಕೇರಳ ರಾಜ್ಯಪಾಲರನ್ನು ಆಡಳಿತಾರೂಢ ಎಲ್‌ಡಿಎಫ್ ಗುರುವಾರ ಮತ್ತೆ ಕೇಳಿಕೊಂಡಿದೆ.
* ವಿರೋಧ ಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಆರೋಪಗಳು ಸುಳ್ಳು. ಇಂತಹ ಸುಳ್ಳು ಆರೋಪ ಮಾಡುವುದನ್ನು ಪ್ರಧಾನಿ ನಿಲ್ಲಿಸಬೇಕು: ಕಾಂಗ್ರೆಸ್‌, ಎನ್‌ಸಿಪಿ, ಡಿಎಂಕೆ, ಆರ್‌ಜೆಡಿ, ಸಿಪಿಐ, ಸಿಪಿಎಂ, ಸಿಪಿಐಎಂಎಲ್‌, ಆರ್‌ಎಸ್‌ಪಿಗಳಿಂದಜಂಟಿ ಹೇಳಿಕೆ
* ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿಯೋಗವನ್ನು ಅಂಬಾಲದಲ್ಲಿ ಕೆಲವು ರೈತರು ಮಂಗಳವಾರ ತಡೆದಿದ್ದರು. ಇದಾದ ಎರಡು ದಿನದಲ್ಲೇ ಅಂಬಾಲ ಪೊಲೀಸ್ ವರಿಷ್ಠಾಧಿಕಾರಿಯನ್ನು ಸರ್ಕಾರವು ವರ್ಗಾವಣೆ ಮಾಡಿದೆ.
* ಪ್ರಧಾನಿ ನರೇಂದ್ರ ಮೋದಿ ಅವರು ರೈತರನ್ನು ಉದ್ದೇಶಿಸಿಶುಕ್ರವಾರ ಮಾತನಾಡಲಿದ್ದಾರೆ. ಈ ಸಂಬಂಧ ದೇಶದ ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ

ರೈತರ ಸಭೆ ಬಗ್ಗೆ ದಾಖಲೆ ಇಲ್ಲ
ನೂತನ ಕೃಷಿ ಸುಧಾರಣಾ ಕಾಯ್ದೆಗಳನ್ನು ರಚಿಸುವ ಮುನ್ನ ಎಷ್ಟು ರೈತ ಸಂಘಟನೆಗಳ ಜತೆ, ಎಷ್ಟು ಬಾರಿ ಸಭೆ ನಡೆಸಲಾಗಿತ್ತು ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಲ್ಲ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಈ ಸಂಬಂಧ ಮುಂಬೈನ ಜತಿನ್ ದೇಸಾಯಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಕೃಷಿ ಸಚಿವಾಲಯವು ಈ ಉತ್ತರ ನೀಡಿದೆ.

‘ಈ ಕಾನೂನುಗಳನ್ನು ರಚಿಸುವ ಮೊದಲು ರೈತ ಸಂಘಟನೆಗಳ ಜತೆ ಎಷ್ಟು ಸಭೆ ನಡೆಸಲಾಗಿತ್ತು ಮತ್ತು ಸಂಸತ್ತಿನಲ್ಲಿ ಇವನ್ನು ಪಾಸು ಮಾಡುವ ಮೊದಲು ಎಷ್ಟು ಬಾರಿ ಸಭೆ ನಡೆಸಲಾಗಿತ್ತು ಎಂಬುದರ ಬಗ್ಗೆ ವಿವರಗಳನ್ನು ಕೇಳಿದ್ದೆ. ಆದರೆ, ಈ ಬಗ್ಗೆ ಯಾವುದೇ ದಾಖಲೆಗಳನ್ನು ನಾವು ನಿರ್ವಹಣೆ ಮಾಡಿಲ್ಲ ಎಂದು ಕೃಷಿ ಸಚಿವಾಲಯವು ಹೇಳಿದೆ’ ಎಂದು ಜತಿನ್ ಹೇಳಿದ್ದಾರೆ.

**

ರೈತರಿಗೆ ಮಾರಕವಾಗಿರುವ ಈ ಕಾಯ್ದೆಗಳನ್ನು ಚರ್ಚೆ ಇಲ್ಲದೇ ಸಂಸತ್ತಿನಲ್ಲಿ ಪಾಸು ಮಾಡಲಾಗಿದೆ. ಇವುಗಳನ್ನು ಶೀಘ್ರವೇ ರದ್ದು ಮಾಡಬೇಕಿರುವುದು ಇಂದಿನ ತುರ್ತು.
-ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

**

ಕಾಂಗ್ರೆಸ್‌ ರೈತರನ್ನು ಸದಾ ನಿರ್ಲಕ್ಷಿಸಿತ್ತು ಮತ್ತು ಪ್ರಧಾನಿ ಮೋದಿ ರೈತರ ಸಬಲೀಕರಣ ಮಾಡಿದ್ದಾರೆ ಎಂಬುದನ್ನು ಸಾಬೀತುಮಾಡುತ್ತೇನೆ. ಧೈರ್ಯವಿದ್ದರೆ ರಾಹುಲ್ ಗಾಂಧಿ ಚರ್ಚೆಗೆ ಬರಲಿ.
-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

**

ಕೃಷಿ ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರೋಣ. ಆದರೆ ಅದಕ್ಕೂ ಮುನ್ನ ತಿದ್ದುಪಡಿ ಏಕೆ ತರಬೇಕು ಎಂಬುದಕ್ಕೆ ರೈತರು ಬಲವಾದ ಕಾರಣವನ್ನು ಒದಗಿಸಬೇಕು.
-ದುಷ್ಯಂತ್ ಚೌಟಾಲಾ, ಹರಿಯಾಣ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT