ದೆಹಲಿಯಲ್ಲಿ ರೈತರ ಪ್ರತಿಭಟನೆ; ಹಲವು ರಸ್ತೆಗಳು ಬಂದ್

ನವದೆಹಲಿ: ತೀವ್ರ ಚಳಿ ಮತ್ತು ಮಳೆಯ ನಡುವೆಯೂ ದೆಹಲಿಯ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಸೋಮವಾರ ದೆಹಲಿಯಿಂದ ಘಾಜಿಯಾಬಾದ್ ಹಾಗೂ ನೋಯ್ಡಾ ಮೂಲಕ ಘಾಜಿಯಾಪುರ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿರುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿ, ಧಂನ್ಸಾ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ದೆಹಲಿ ತಲುಪಲು ಆನಂದ್ ವಿಹಾರ್, ಡಿಎನ್‌ಡಿ, ಭೋಪ್ರಾ ಮತ್ತು ಲೋನಿ ಗಡಿಭಾಗದ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಕುರಿತು ದೆಹಲಿ ಸಂಚಾರಿ ಪೊಲೀಸ್ ವಿಭಾಗ ಸರಣಿ ಟ್ವೀಟ್‌ಗಳನ್ನು ಮಾಡಿದೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶದ ವಿವಿಧ ಭಾಗಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರ ಚಳಿಯಲ್ಲೇ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ, ಭಾನುವಾರ ಮಳೆ ಕೂಡ ಅಡ್ಡಿ ಮಾಡಿದೆ. ಆದರೂ ರೈತರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಕದಲಿಲ್ಲ. ‘ಹವಾಮಾನ ನಮ್ಮ ಪ್ರತಿಭಟನೆಗೆ ಅಡ್ಡಿಯಾಗುವುದಿಲ್ಲ. ನಮ್ಮ ಉತ್ಸಾಹ ಕುಂದಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೆವೆ‘ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಸರ್ಕಾರ ಮತ್ತು ರೈತ ಸಂಘಟನೆಗಳು ನಡುವೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಎರಡೂ ಕಡೆಯವರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಇಂದು (ಸೋಮವಾರ) ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ರೈತ ಸಂಘಟನೆಗಳ ನಡುವೆ ಏಳನೇ ಸುತ್ತಿನ ಮಾತುಕತೆ ನಡೆಯಲಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.