ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾಣದ ರೈತರ ಪ್ರತಿಭಟನೆ: ‘ಸುಪ್ರೀಂ’ ಕಳವಳ

Last Updated 6 ಜನವರಿ 2021, 20:22 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರವು ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಬುಧವಾರ ಕಳವಳ ವ್ಯಕ್ತಪಡಿಸಿದೆ. ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ಇದೇ 11ರಂದು ನಡೆಸಲು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು ನಿರ್ಧರಿಸಿದೆ.

ಸರ್ಕಾರ ಮತ್ತು ರೈತ ಸಂಘಟನೆಗಳು ಮಾತುಕತೆಯ ಮೂಲಕ ಸದ್ಯದಲ್ಲಿಯೇ ಸಹಮತಕ್ಕೆ ಬರುವ ಸಾಧ್ಯತೆ ಇದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್ ಹೇಳಿದರಾದರೂ, ‘ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ’ ಎಂದು ಪೀಠವು ಹೇಳಿತು.

ಸರ್ಕಾರ ಮತ್ತು ರೈತರ ನಡುವೆ ‘ಆರೋಗ್ಯಕರ ಚರ್ಚೆ’ ನಡೆಯುತ್ತಿದೆ. ಹಾಗಾಗಿ, ಅರ್ಜಿಗಳ ವಿಚಾರಣೆಯನ್ನು ತಕ್ಷಣವೇ ನಡೆಸಬಾರದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ಸರ್ಕಾರವು ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿದರೆ ಅದು ಮಾತುಕತೆಯ ಸಾಧ್ಯತೆಯನ್ನು ಕುಗ್ಗಿಸಬಹುದು ಎಂದು ವೇಣುಗೋಪಾಲ್‌ ಹೇಳಿದರು.

ಹಾಗಾಗಿ, ಮಾತುಕತೆಗೆ ನಿಗದಿಯಾಗಿರುವ ಶುಕ್ರವಾದ ಬಳಿಕವೇ ಅರ್ಜಿಗಳ ವಿಚಾರಣೆಗೆ ಪೀಠವು ನಿರ್ಧರಿಸಿತು.

ರೈತರ ಪ್ರತಿಭಟನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕಳೆದ ವರ್ಷದ ಡಿಸೆಂಬರ್‌ 17ರಂದು ವಿಚಾರಣೆ ನಡೆಸಿದ್ದ ಪೀಠವು, ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸುವುದು ರೈತರ ಹಕ್ಕು ಎಂದು ಹೇಳಿತ್ತು. ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ನಡೆಯಬೇಕು ಎಂದು ಸೂಚಿಸಿತ್ತು. ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸ್ವತಂತ್ರ
ಸಮಿತಿಯೊಂದನ್ನು ತಾನೇ ರಚಿಸುವುದಾಗಿಯೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT