ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್: 50 ದಲಿತ ಕುಟುಂಬಗಳನ್ನು ಗ್ರಾಮದಿಂದ ಹೊರಹಾಕಿ ದೌರ್ಜನ್ಯ

Last Updated 30 ಆಗಸ್ಟ್ 2022, 14:42 IST
ಅಕ್ಷರ ಗಾತ್ರ

ಮೇದಿನಿನಗರ: 50 ದಲಿತ ಕುಟುಂಬಗಳನ್ನು ಗ್ರಾಮದಿಂದ ಹೊರ ಹಾಕಿರುವ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ನಡೆದಿದೆ.

ಒಂದು ನಿರ್ದಿಷ್ಟ ಸಮುದಾಯದ ಜನರು ನಾಲ್ಕು ದಶಕಗಳಿಂದ ಗ್ರಾಮದಲ್ಲಿ ವಾಸವಿದ್ದ ದಲಿತ ಕುಟುಂಬಗಳನ್ನು ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತ ಮಾಹಿತಿ ಆಧರಿಸಿ ಮೇದಿನಿನಗರದ ಉಪವಿಭಾಗಾಧಿಕಾರಿ(ಎಸ್‌ಡಿಒ) ರಾಜೇಶ್ ಕುಮಾರ್ ಸಹ್ ಮತ್ತು ಬಿಶ್ರಮ್‌ಪುರದ ಉಪ–ವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಪಿಒ) ಸುರಜಿತ್ ಕುಮಾರ್ ಅವರು ಪಾಂಡು ಪೊಲೀಸ್ ಠಾಣಾ ವ್ಯಾಪ್ತಿಯ ಟೊಂಗ್ರಿ ಪಹಾಡಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತಂತೆ ಹೆಸರನ್ನು ಉಲ್ಲೇಖಿಸಿ 12 ಜನರ ವಿರುದ್ಧ ಮತ್ತು ಹೆಸರು ಉಲ್ಲೇಖಿಸದೆ 150 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಸೂಚಿಸಿರುವುದಾಗಿ ಪಲಮು ಜಿಲ್ಲಾಧಿಕಾರಿ ಎ ದೊಡೆ ತಿಳಿಸಿದ್ದಾರೆ. 50 ದಲಿತ ಕುಟುಂಬಗಳಿಗೆ ಅದೇ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಪರಿಹಾರ ಕಾರ್ಯಾಚರಣೆಯ ತಂಡಗಳು ಈ ಹಾದಿಯಲ್ಲಿ ಕಾರ್ಯೋನ್ಮುಖವಾಗಿವೆ ಎಂದೂ ತಿಳಿಸಿದ್ದಾರೆ.

ಸಂತ್ರಸ್ತರೆಲ್ಲರೂ ಮುಷರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಳ್ಳಿಯಲ್ಲಿ 4 ದಶಕಗಳಿಗೂ ಹೆಚ್ಚು ಸಮಯದಿಂದ ವಾಸವಿದ್ದರು ಎಂದು ವರದಿ ತಿಳಿಸಿದೆ.

‘ನಮ್ಮ ಹಳ್ಳಿಯಲ್ಲಿ ನಾವು ಹಲವು ವರ್ಷಗಳಿಂದ ವಾಸವಿದ್ದೆವು. ಆದರೆ, ಸೋಮವಾರ ಮರಮಟು ಹಳ್ಳಿಯ ಜನರ ಗುಂಪು ನಮ್ಮನ್ನು ಒತ್ತಾಯಪೂರ್ವಕವಾಗಿ ಹೊರಹಾಕಿತು. ಅಲ್ಲದೆ, ನಮ್ಮ ಜೊತೆಗೆ ಸಾಮಗ್ರಿಗಳನ್ನು ವಾಹನದಲ್ಲಿ ತುಂಬಿಕೊಂಡು ಅರಣ್ಯ ಸಮೀಪದ ಜಾಗದಲ್ಲಿ ಹಾಕಿದರು’ ಎಂದು ಸಂತ್ರಸ್ತ ಜಿತೇಂದರ್ ಮುಷಾರ್ ಹೇಳಿದ್ದಾರೆ.

ನಮ್ಮ ಮೇಲೆ ಹಲ್ಲೆ ಮಾಡಿದ ಅವರು, ಪೊಲೀಸ್ ಠಾಣೆ ಮೆಟ್ಟಿಲೇರದಂತೆ ಬೆದರಿಸಿದರು ಎಂದೂ ಅವರು ದೂರಿದ್ದಾರೆ.

ದಲಿತ ಕುಟುಂಬಗಳಿಗೆ ಅದೇ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಕ್ಷೇತ್ರ ಅಭಿವೃದ್ಧಿ ಅಧಿಕಾರಿಯು ಅವರಿಗೆ ಧೋತಿ, ಸೀರೆ ಮತ್ತು ಲುಂಗಿಗಳನ್ನು ಒದಗಿಸಿದ್ದು, ಊಟದ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರ ಬಂಧನಕ್ಕೆ ಭಾರೀ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದಲಿತರ ಮನೆಗಳನ್ನು ಉರುಳಿಸಲಾಗಿದೆ. ಆದರೆ, ಅದೇ ಜಾಗದಲ್ಲಿ ಭದ್ರತೆ ಜೊತೆಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಎಸ್‌ಡಿಒ ತಿಳಿಸಿದ್ದಾರೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT