ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿರುಚಿದ ವಿಡಿಯೊ: ಬಿಜೆಪಿ ಸಂಸದರ ವಿರುದ್ಧ ಛತ್ತೀಸ್‌ಗಡದಲ್ಲೂ ಎಫ್‌ಐಆರ್‌’

Last Updated 4 ಜುಲೈ 2022, 12:27 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ತಿರುಚಿದ ವಿಡಿಯೊ ಹಂಚಿಕೊಂಡ ಆರೋಪದಲ್ಲಿ ಬಿಜೆಪಿ ಸಂಸದರಾದ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಮತ್ತು ಸುಬ್ರತ್‌ ಪಾಠಕ್‌ ಅವರ ವಿರುದ್ಧ ಛತ್ತೀಸ್‌ಗಡದ ಬಿಲಾಸ್‌ಪುರದಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಸೋಮವಾರ ತಿಳಿಸಿದ್ದಾರೆ.

ಈ ಇಬ್ಬರ ವಿರುದ್ಧ ದೆಹಲಿ, ಜಾರ್ಖಂಡ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ದೂರು ದಾಖಲಿಸಿದೆ ಎಂದೂ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದ ಬೆನ್ನಲ್ಲೇ ದೂರುಗಳು ದಾಖಲಾಗಿವೆ.

‘ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ಮಾಜಿ ಸಚಿವರೊಬ್ಬರು ಸುಳ್ಳು ಸುದ್ದಿಗಳನ್ನು ಹಂಚಿಕೊಂಡರೆ ಅದು ದೇಶದ್ರೋಹಕ್ಕೆ ಸಮ’ ಎಂದು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸುಪ್ರಿಯಾ ಶ್ರೀನಾಥೆ ಹೇಳಿದ್ದಾರೆ.

ಕೇರಳದಲ್ಲಿ ತಮ್ಮ ಸಂಸದರ ಕಚೇರಿ ಗುರಿಯಾಗಿಸಿ ಗಲಾಟೆ ಮಾಡಿದ್ದ ಎಸ್‌ಎಫ್‌ಐ ಕಾರ್ಯಕರ್ತರನ್ನು ಕ್ಷಮಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಈ ಹೇಳಿಕೆಯನ್ನು ತಿರುಚಿ ಉದಯಪುರದಲ್ಲಿ ನಡೆದ ಟೇಲರ್‌ ಹತ್ಯೆ ಪ್ರಕರಣಕ್ಕೆ ಅನ್ವಯಿಸಿ ಹೇಳಿದಂತೆ ವಿಡಿಯೊವನ್ನು ರೂಪಿಸಿದ್ದು, ಬಿಜೆಪಿಯ ಹಲವರು ಇದನ್ನು ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT