ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸಚಿವಾಲಯದಲ್ಲಿ ಬೆಂಕಿ: ಚಿನ್ನ ಕಳ್ಳಸಾಗಣೆ ಸಾಕ್ಷ್ಯ ನಾಶ ಆರೋಪ ಮಾಡಿದ ವಿಪಕ್ಷ

Last Updated 26 ಆಗಸ್ಟ್ 2020, 2:01 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ರಾಜ್ಯ ಸಚಿವಾಲಯದಲ್ಲಿ ಮಂಗಳವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸರ್ಕಾರಕ್ಕೆ ನಂಟಿದೆ ಎಂಬ ಆರೋಪಗಳಿರುವುದರಿಂದ, ಇದು ಸಾಕ್ಷ್ಯ ನಾಶದ ಯತ್ನ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಆರೋಪಿಸಿವೆ.

ಮಾಧ್ಯಮದವರು, ರಾಜಕಾರಣಿಗಳು ಹೊರಗೆ ಹೋಗುವಂತೆ ಕೇರಳ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಮನವಿ ಮಾಡಿದ್ದು, ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿ. ಮುರಳೀಧರನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸೇರಿ ಹಲವು ಕೋಲಾಹಲದ ಕ್ಷಣಗಳಿಗೆ ಸಚಿವಾಲಯ ಸಾಕ್ಷಿಯಾಯಿತು.

ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ರಮೇಶ್ ಚೆನ್ನಿತ್ತಲ ಅವರಿಗೆ ತೀವ್ರ ಪ್ರತಿಭಟನೆಯ ಬಳಿಕ ಅಗ್ನಿ ಆಕಸ್ಮಿಕ ಸಂಭವಿಸಿದ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ವಿದೇಶ ಪ್ರವಾಸ ಮತ್ತು ಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಡತಗಳು ಹಾನಿಗೊಳಗಾದವುಗಳಲ್ಲಿ ಸೇರಿವೆ ಎಂಬುದು ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಹೀಗಾಗಿ ಘಟನೆಯು ಚಿನ್ನ ಕಳ್ಳಸಾಗಣೆ ಮತ್ತು ಅದಕ್ಕೆ ಸಂಬಂಧಿತ ಇತರ ತನಿಖೆಗಳಿಗೆ ಅಡ್ಡಿ ಉಂಟುಮಾಡಲು ಹೂಡಿದ ವ್ಯವಸ್ಥಿತ ಸಂಚು’ ಎಂದು ಆರೋಪಿಸಿದ್ದಾರೆ.

ಘಟನೆ ಖಂಡಿಸಿ ಕರಾಳ ದಿನ ಆಚರಿಸುವಂತೆಯೂ ಪ್ರತಿಪಕ್ಷ ಕರೆ ನೀಡಿತ್ತು.

ಪ್ರಧಾನ ಆಡಳಿತ ಕಚೇರಿಯ ರಾಜಕೀಯ ವಿಭಾಗದಲ್ಲಿ ಸಂಜೆ 4.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ರಾಜ್ಯಕ್ಕೆ ತರಲಾದ ಸರಕುಗಳ ಮಾಹಿತಿಯನ್ನು ಒದಗಿಸುವಂತೆ ಪ್ರಧಾನ ಆಡಳಿತ ಕಚೇರಿ ಅಧಿಕಾರಿ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಕೇಳಿದ್ದವು ಎಂದು ಇತ್ತೀಚೆಗೆ ವರದಿಯಾಗಿತ್ತು. ಸಚಿವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸುವಂತೆ ಎನ್‌ಐಎ ಕೋರಿತ್ತು. ಆದರೆ, ತಾಂತ್ರಿಕ ಕಾರಣ ನೀಡಿರುವ ಅಧಿಕಾರಿಗಳು ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್‌ಐಎಗೆ ನೀಡಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅಗ್ನಿ ಆಕಸ್ಮಿಕದ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿವೆ.

‘ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ. ಸರ್ಕಾರಿ ಅತಿಥಿಗೃಹ ಹಂಚಿಕೆಗೆ ಸಂಬಂಧಿಸಿದ ಕಡತಗಳಿಗಷ್ಟೇ ಹಾನಿಯಾಗಿವೆ’ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿಯನ್ನು ತಕ್ಷಣವೇ ನಂದಿಸಲಾಗಿತ್ತು. ಅದೃಷ್ಟವಶಾತ್, ಸಾವು–ನೋವು ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT