ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ತಲುಪಲಿದೆ ಕೋವಿಡ್ ಲಸಿಕೆ, ಸಿದ್ಧವಾಗಿರಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

Last Updated 7 ಜನವರಿ 2021, 13:49 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕೆಗೆ ಅನುಮೋದನೆ, ಮೊದಲ ಹಂತದ ಲಸಿಕೆ ತಾಲೀಮನ್ನು ಯಶಸ್ವಿಯಾಗಿ ನಡೆಸಿದ ಕೇಂದ್ರ ಸರ್ಕಾರ ಇದೀಗ ಲಸಿಕೆ ವಿತರಣೆಗೆ ವೇದಿಕೆ ಸಿದ್ಧಪಡಿಸುತ್ತಿದೆ. ಸದ್ಯದಲ್ಲೇ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ -19 ಲಸಿಕೆ ತಲುಪಲಿದ್ದು, ಲಸಿಕೆ ಸಂಗ್ರಹಣೆಗೆ ಸಿದ್ಧರಾಗಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಮೊದಲಿಗೆ ಲಸಿಕೆ ಸರಬರಾಜುದಾರರಿಂದ ನಿಗದಿತ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ (ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ)ಗಳಿಗೆ ಕೋವಿಡ್ 19 ಲಸಿಕೆ ಸರಬರಾಜಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಇನ್ನುಳಿದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಚಂಡೀಗಡ, ದಾಮನ್ ಮತ್ತು ನಗರ್ ಹವೆಲಿ, ಡಿಯು ಮತ್ತು ದಾಮನ್, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಲಕ್ಷ ದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿ, ಸಿಕ್ಕಿಂ, ತ್ರಿಪುರ ಮತ್ತು ಉತ್ತರಾಖಂಡ) ಗಳಿಗೆ ಆಯಾ ಸರ್ಕಾರಿ ಮೆಡಿಕಲ್ ಡಿಪೋಗಳಿಗೆ ಲಸಿಕೆ ತಲುಪಿಸಲಾಗುತ್ತದೆ ಎಂದು ತಿಳಿಸಿದೆ.

" ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೀಘ್ರದಲ್ಲೇ ಮೊದಲ ಹಂತದ ಕೋವಿಡ್ -19 ಲಸಿಕೆ ಪೂರೈಕೆ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ, ಮುಂಬರುವ ಲಸಿಕೆಗಳನ್ನು ಸ್ವೀಕರಿಸಲು ಆಧುನಿಕ ಪೂರ್ವ ತಯಾರಿ ಮತ್ತು ಸಿದ್ಧತೆಯನ್ನು ಮಾಡಿಕೊಳ್ಳುವಂತೆ ನಿಮ್ಮನ್ನು ಕೋರಲಾಗಿದೆ" ಎಂದು ಆರೋಗ್ಯ ಸಚಿವಾಲಯದ ಸಲಹೆಗಾರರಾಗಿರುವ ಡಾ. ಪ್ರದೀಪ್ ಹಾಲ್ಡರ್ , ಜನವರಿ 5 ರ ಪತ್ರದಲ್ಲಿ ತಿಳಿಸಿದ್ದಾರೆ.

ಲಸಿಕೆ ಪೂರೈಕೆಯಾದ ಬಳಿಕ ಜಿಲ್ಲೆಗಳಲ್ಲಿ ಫಲಾನುಭವಿಗಳ ನೋಂದಣಿ ಆಧಾರದ ಮೇಲೆ ಲಸಿಕೆ ವಿತರಣೆ ಮಾಡಲಾಗುತ್ತದೆ. ಈ ಕುರಿತ ಮಾಹಿತಿಯನ್ನು ಸದ್ಯದಲ್ಲೇ ಪ್ರತ್ಯೇಕವಾಗಿ ತಿಳಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಔಷಧ ನಿಯಂತ್ರಕವು ಭಾನುವಾರ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಗೆ ದೇಶದಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ಅನುಮೋದನೆ ನೀಡಿತ್ತು.

ಲಸಿಕೆ ಅನುಮೋದನೆ ಪಡೆದ ದಿನದಿಂದ 10 ದಿನಗಳೊಳಗೆ ವಿತರಣೆಗೆ ನಾವು ಸಿದ್ಧವಿದ್ದೇವೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿತ್ತು. ಆದರೆ, ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು.

ಈ ಮಧ್ಯೆ, ಲಸಿಕೆ ವಿತರಣೆಗೆ ಸಿದ್ಧಪಡಿಸಿರುವ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಪರೀಕ್ಷಿಸಲು ಜನವರಿ 8ರಂದು ಉತ್ತರ ಪ್ರದೇಶ ಮತ್ತು ಹರಿಯಾಣ ಹೊರತುಪಡಿಸಿ, ದೇಶದ ಉಳಿದೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಎರಡನೇ ಹಂತದ ಕೋವಿಡ್ ಲಸಿಕೆ ತಾಲೀಮು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT