ಇನ್ಸುಲಿನ್ 3ನೇ ಹಂತದ ಪ್ರಯೋಗ ಕೈಬಿಡಲು ಲಂಚ: ಜಂಟಿ ಔಷಧ ನಿಯಂತ್ರಕ ಸೇರಿ ಐವರ ಸೆರೆ

ನವದೆಹಲಿ: ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳಿಗಾಗಿ ‘ಬಯೋಕಾನ್ ಬಯೋಲಾಜಿಕ್ಸ್’ ಅಭಿವೃದ್ಧಿಪಡಿಸಿರುವ ‘ಇನ್ಸುಲಿನ್ ಆಸ್ಪರ್ಟ್’ ಚುಚ್ಚುಮದ್ದಿನ 3ನೇ ಹಂತದ ಕ್ಲಿನಿಕಲ್ ಪ್ರಯೋಗ ಕೈಬಿಡಲು, ಲಂಚ ಪಡೆದ ಪ್ರಕರಣದಲ್ಲಿ ಜಂಟಿ ಔಷಧ ನಿಯಂತ್ರಕ ಎಸ್. ಈಶ್ವರ ರೆಡ್ಡಿ, ಬಯೋಕಾನ್ ಬಯೋಲಾಜಿಕ್ಸ್‌ನ ಸಹ ಉಪಾಧ್ಯಕ್ಷ ಎಲ್. ಪ್ರವೀಣ್ ಕುಮಾರ್ ಮತ್ತು ಇತರ ಮೂವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.
ಕಿರಣ್ ಮಜುಂದಾರ್ ಷಾ ಅವರ ನೇತೃತ್ವದ ಬಯೋಕಾನ್‌ನ ಅಂಗ ಸಂಸ್ಥೆ ಬಯೋಕಾನ್ ಬಯೋಲಾಜಿಕ್ಸ್, ಲಂಚದ ಆರೋಪಗಳನ್ನು ನಿರಾಕರಿಸಿದೆ. ಸಿನರ್ಜಿ ನೆಟ್‌ವರ್ಕ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ದಿನೇಶ್
ದುವಾ, ಬಯೋಕಾನ್ ಬಯೋಲಾಜಿಕ್ಸ್ ನ ಮಧ್ಯವರ್ತಿ ಎನ್ನಲಾದ ಗುಲ್ಜಿತ್ ಸೇಥಿ, ಮತ್ತು ಸಹಾಯಕ ಔಷಧ ನಿಯಂತ್ರಕ ಅನಿಮೇಶ್ ಕುಮಾರ್ ಬಂಧಿತರು.
ದಿನೇಶ್ ದುವಾ ಅವರು ರೆಡ್ಡಿಗೆ ₹4 ಲಕ್ಷ ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಉಳಿದಿಬ್ಬರು ಲಂಚ ಪ್ರಕರಣದಲ್ಲಿ ನೆರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಐವರ ವಿರುದ್ಧ ಸಿಬಿಐ ಐಪಿಸಿಯ ವಿವಿಧ ಕಲಂಗಳಡಿ ಕ್ರಿಮಿನಲ್ ಪಿತೂರಿ, ವಂಚನೆ, ನಕಲಿ ಮತ್ತು ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿದೆ. ಬಯೋಕಾನ್ ಬಯೋಲಾಜಿಕ್ಸ್‌ನ ವಕ್ತಾರರು ಈ ಆರೋಪಗಳನ್ನು ನಿರಾಕರಿಸಿದ್ದು, ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
‘ಕೆಲವು ಮಾಧ್ಯಮಗಳು ಮಾಡಿರುವ ಲಂಚದ ಆರೋಪಗಳನ್ನು ನಾವು ನಿರಾಕರಿಸುತ್ತೇವೆ. ನಮ್ಮ ಎಲ್ಲಾ ಉತ್ಪನ್ನ ಅನುಮೋದನೆಗಳು ಕಾನೂನುಬದ್ಧವಾಗಿವೆ ಮತ್ತು ವಿಜ್ಞಾನ ಮತ್ತು ಕ್ಲಿನಿಕಲ್ ದತ್ತಾಂಶಗಳಿಂದ ಬೆಂಬಲಿತವಾಗಿವೆ. ನಮ್ಮ ಬಿಆಸ್ಪಾರ್ಟ್ ಯುರೋಪ್ ಮತ್ತು ಇತರ ಹಲವು ದೇಶಗಳಲ್ಲಿ ಅನುಮೋದನೆ ಪಡೆದಿದೆ’ ಎಂದು ವಕ್ತಾರರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.