ಸೋಮವಾರ, ಅಕ್ಟೋಬರ್ 3, 2022
24 °C

ತಮಿಳುನಾಡು ಸಚಿವರ ಕ್ಷಮೆ ಕೋರಿದ್ದ ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುರೈ:  ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಅವರ ಕಾರಿನ ಮೇಲೆ ಮಧುರೈನಲ್ಲಿ ಚಪ್ಪಲಿ ತೂರಿದ ಐವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ಘಟನೆಯನ್ನು ಖಂಡಿಸಿ, ಸಚಿವರ ಕ್ಷಮೆ ಕೋರಿದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 

ಮಧುರೈನ ವಿಮಾನ ನಿಲ್ದಾಣದಲ್ಲಿ ಶನಿವಾರ ಸಚಿವರ ಕಾರಿನ ಮೇಲೆ ಚಪ್ಪಲಿ ತೂರಲಾಗಿತ್ತು. ಪ್ರಕರಣದಲ್ಲಿ ಬಂಧಿಯಾಗಿರುವ ಐವರು ಬಿಜೆಪಿ ಕಾರ್ಯಕರ್ತರ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಧುರೈ ಪೊಲೀಸ್‌ ಆಯುಕ್ತರು ತಿಳಿಸಿದ್ದರು. 

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷ ಶರವಣನ್,  ‘ಮಧುರೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ಮಧ್ಯರಾತ್ರಿ ಸಚಿವರನ್ನು ಭೇಟಿಯಾಗಿ ಘಟನೆಗೆ ಕ್ಷಮೆಯಾಚಿಸಿದ್ದೇನೆ. ನಮ್ಮ ಕಾರ್ಯಕರ್ತರು ಅಂಕೆ ಮೀರಿ ವರ್ತಿಸಿರುವುದು ಬೇಸರ ತರಿಸಿದೆ’ ಎಂದಿದ್ದರು. 

'ನನಗೆ ಬಿಜೆಪಿ ಹುದ್ದೆಗಿಂತ ಶಾಂತಿ ಮುಖ್ಯ. ನಾನು ಬಿಜೆಪಿಯಲ್ಲಿ ಮುಂದುವರಿಯುವುದಿಲ್ಲ. ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ನೀಡಲಿದ್ದೇನೆ. ಡಿಎಂಕೆ ಸೇರುವ ಬಗ್ಗೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಿಎಂಕೆ ಸೇರುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಶರವಣನ್ ಹೇಳಿದ್ದರು. 

ಸರವಣನ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯು ಅವರನ್ನು ಉಚ್ಚಾಟನೆ ಮಾಡಿದೆ. ‘ಶಿಸ್ತು ಉಲ್ಲಂಘಿಸಿ, ಪಕ್ಷದ ಹೆಸರಿಗೆ ಕಳಂಕ ತಂದಿದ್ದಕ್ಕಾಗಿ ಬಿಜೆಪಿ ಮಧುರೈ ಜಿಲ್ಲಾಧ್ಯಕ್ಷ ಶರವಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು