ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ತಲೆಮಾರು ಮೀಸಲಾತಿ ಬೇಕು: ಸುಪ್ರೀಂ ಪ್ರಶ್ನೆ

ಮೀಸಲಾತಿ– ಮಂಡಲ್‌ ತೀರ್ಪನ್ನು ಪುನರ್ ಪರಿಶೀಲಿಸಬೇಕೇ ಎಂಬ ‘ಸುಪ್ರೀಂ’ ವಿಚಾರಣೆ
Last Updated 19 ಮಾರ್ಚ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನು ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನೆ ಮಾಡಿದೆ.

ಮರಾಠಾ ಕೋಟಾ ಪ್ರಕರಣದ ವಿಚಾರಣೆ ಸಂದರ್ಭದಲ್ಲಿಮಂಡಲ್‌ ತೀರ್ಪಿನ ಬಗ್ಗೆ ಮರುಪರಿಶೀಲಿಸಬೇಕಾದ ಅಗತ್ಯವಿದೆಯೇ ಎಂಬ ವಿಚಾರವನ್ನು ಅವಲೋಕಿಸುವ ವೇಳೆ ಸುಪ್ರೀಂ ಕೋರ್ಟ್ ಈ ಪ್ರಶ್ನೆ ಕೇಳಿತು.

ಒಂದು ವೇಳೆ ಮೀಸಲಾತಿಯ ಶೇ 50ರಷ್ಟು ಮಿತಿಯನ್ನು ತೆಗೆದುಹಾಕಿದರೆ ‘ಫಲಿತಾಂಶದಲ್ಲಿ ಅಸಮಾನತೆ’ ಇರುತ್ತದೆಯಾ ಎಂದೂ ಕೇಳಿತು.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ಮಹಾರಾಷ್ಟ್ರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರಲ್ಲಿ ಈ ವಿಚಾರ ಕೇಳಿತು.

‘ಬದಲಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೋಟಾಗಳನ್ನು ಸರಿಪಡಿಸಲು ನ್ಯಾಯಾಲಯಗಳು ಅದನ್ನು ರಾಜ್ಯಗಳಿಗೆ ಬಿಡಬೇಕು ಮತ್ತು 1931ರ ಜನಗಣತಿಯ ಆಧಾರದಲ್ಲಿ ಮಂಡಲ್ ತೀರ್ಪನ್ನು ರೂಪಿಸಲಾಯಿತು, ಈಗ ಜನಸಂಖ್ಯೆ ಅಧಿಕವಾಗಿದೆ, ದೊಡ್ಡ ಸಂಖ್ಯೆಯಲ್ಲಿ ಜನರು ಈಗಲೂ ಹಿಂದುಳಿದಿದ್ದಾರೆ, ಹೀಗಾಗಿ ಮೀಸಲಾತಿ ಪ್ರಮಾಣವನ್ನುಶೇ 50ರ ಮಿತಿಯಿಂದ ಹೆಚ್ಚಿಸುವ ಅಗತ್ಯ ಇದೆ’ ಎಂದು ವಾದಿಸಿದರು.

‘ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಶೇ 10 ರಷ್ಟು ಮೀಸಲಾತಿ ಕೋಟಾ ನೀಡಿರುವ ಕೇಂದ್ರದ ನಿರ್ಧಾರವು ಶೇ 50ರ ಮೀಸಲಾತಿ ಮಿತಿಯನ್ನು ಉಲ್ಲಂಘಿಸಿದೆ’ ಎಂದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ರಾಜ್ಯಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಯಾವುದೇ ಅಭಿವೃದ್ಧಿ ನಡೆದಿಲ್ಲ, ಯಾವುದೇ ಹಿಂದುಳಿದ ಜಾತಿಗಳು ಮುಂದುವರಿದಿಲ್ಲ ಎಂದು ನಾವು ಒಪ್ಪಿಕೊಳ್ಳಬಹುದೇ’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ಹಿಂದುಳಿದ ಜಾತಿಯಲ್ಲಿದ್ದು ಮುಂದೆ ಬಂದವರನ್ನು ಮೀಸಲಾತಿಯಿಂದ ಹೊರಗಿಡುವುದಕ್ಕಾಗಿಯೇ ಮಂಡಲ್‌ ತೀರ್ಪಿನ ಪುನರ್ ಪರಿಶೀಲನೆಯ ಅಗತ್ಯ ಎದುರಾಗಿದೆ’ ಎಂದು ಪೀಠ ಹೇಳಿತು.

ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT