ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ವ್ಯಾಪ್ತಿ 2,200 ಚ.ಕಿ.ಮೀ ವೃದ್ಧಿ

ಎರಡು ವರ್ಷಗಳಲ್ಲಿ ಪ್ರಗತಿ * ಆದರೆ, 2017–2019 ಅವಧಿಗೆ ಹೋಲಿಸಿದರೆ ಕುಸಿತ!
Last Updated 13 ಜನವರಿ 2022, 15:40 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು 2,200 ಚದರ ಕಿ.ಮೀ.ನಷ್ಟು ಹೆಚ್ಚಿದೆ. ಆದರೆ, ಅದರ ಹಿಂದಿನ ಎರಡುವರ್ಷಗಳಿಗೆ ಹೋಲಿಸಿದರೆ ತುಸು ಕಡಿಮೆಯಾಗಿದೆ.

ಗುರುವಾರ ಅರಣ್ಯ ವ್ಯಾಪ್ತಿ ಕುರಿತಾದ 2021ರ ವರದಿ ಬಿಡುಗಡೆ ಮಾಡಲಾಗಿದೆ. 2019ರ ಸ್ಥಿತಿಗೆ ಹೋಲಿಸಿದರೆ, ಅರಣ್ಯ ವ್ಯಾಪ್ತಿಯು 1,540 ಚದರ ಕಿ.ಮೀ ಮತ್ತು ಮರಗಳ ವ್ಯಾಪ್ತಿಯು 721 ಚದರ ಕಿ.ಮೀ.ನಷ್ಟು ಹಿಗ್ಗಿದೆ.

ಆದರೆ, 2017 ಮತ್ತು 2019ರ ಅವಧಿಯಲ್ಲಿ ಅರಣ್ಯ ಬೆಳವಣಿಗೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಈ ಅವಧಿಯಲ್ಲಿ ಅರಣ್ಯ 3,976 ಚದರ ಕಿ.ಮೀ. ಮತ್ತುಮರಗಳ ವ್ಯಾಪ್ತಿಯು 1,212 ಚದರ ಕಿ.ಮೀ. ಏರಿಕೆಯಾಗಿತ್ತು.

ದ್ವೈವಾರ್ಷಿಕ ಅರಣ್ಯ ವರದಿಗೆ ಸಂಬಂಧಿತ ಅಂಕಿ ಅಂಶಗಳು ಅಕ್ಟೋಬರ್ –ಡಿಸೆಂಬರ್‌ 2019ರ ಅವಧಿಗೆ ಸಂಬಂಧಿಸಿವೆ. ಪ್ರಗತಿ ಕುಸಿತಕ್ಕೆ ಕೋವಿಡ್‌ ಕಾರಣ ಎನ್ನಲಾಗದು. ಏಕೆಂದರೆ, ಈ ಅವಧಿಯಲ್ಲೂ ಅರಣ್ಯೀಕರಣ ಚಟುಟಿಕೆಗಳು ಚಾಲ್ತಿಯಲ್ಲಿದ್ದವು. ಆದರೂ, ಪ್ರಗತಿ ಕುಂಠಿತಕ್ಕೆ ವರದಿಯಲ್ಲಿ ಕಾರಣವನ್ನು ಉಲ್ಲೇಖಿಸಿಲ್ಲ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, ಮರಗಳ ವ್ಯಾಪ್ತಿ ವಿಸ್ತರಿಸಲುರಾಷ್ಟ್ರೀಯ ಹಸಿರು ಮಿಷನ್‌ನ ಎರಡನೇ ಹಂತದಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವರದಿಯಂತೆ, ದಟ್ಟ ಅರಣ್ಯದ ವ್ಯಾಪ್ತಿ 2019 ಮತ್ತು 2021ರ ನಡುವೆ ಸುಮಾರು 1,582 ಚದರ ಕಿ.ಮೀ.ನಷ್ಟು ಕಡಿಮೆ ಆಗಿದೆ. ಆದರೆ, ಅತಿದಟ್ಟ ಅರಣ್ಯ ವ್ಯಾಪ್ತಿಯು ಸುಮಾರು 501 ಚದರ ಕಿ.ಮೀನಷ್ಟು ಹೆಚ್ಚಾಗಿದೆ.

ಅರಣ್ಯ ವ್ಯಾಪ್ತಿ ಹೆಚ್ಚಳವಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ 155 ಚದರ ಕಿ.ಮೀ. ಅರಣ್ಯ ಪ್ರದೇಶ ಹೆಚ್ಚಿದೆ. ಉಳಿದಂತೆ, ಆಂಧ್ರಪ್ರದೇಶ (747 ಚ.ಕಿ.ಮೀ), ತೆಲಂಗಾಣ (632 ಚ.ಕಿ.ಮೀ), ಒಡಿಶಾ (537 ಚ.ಕಿ.ಮೀ) ಮತ್ತು ಜಾರ್ಖಂಡ್‌ (110 ಚ.ಕಿ.ಮೀ) ಇವೆ. ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿಯು ಕುಗ್ಗಿದೆ.

ಕರ್ನಾಟಕದಲ್ಲಿ 2019ನೇ ಸಾಲಿನ ಅಂದಾಜಿಗೆ ಹೋಲಿಸಿದರೆ ಗರಿಷ್ಠ ಪ್ರಮಾಣದ ಅರಣ್ಯ ಪ್ರದೇಶ ವೃದ್ಧಿಯು ಬೆಳಗಾವಿ (24.06 ಚ.ಕಿ.ಮೀ), ಚಿತ್ರದುರ್ಗ (30.39 ಚ.ಕಿ.ಮೀ), ತುಮಕೂರು ಜಿಲ್ಲೆಯಲ್ಲಿ (39.03 ಚ.ಕಿ.ಮೀ) ಆಗಿದೆ. ಗರಿಷ್ಠ ಪ್ರಮಾಣದಲ್ಲಿ ಅರಣ್ಯ ವ್ಯಾಪ್ತಿಯು ಕುಗ್ಗಿರುವ ಜಿಲ್ಲೆ ಎಂದರೆ ಉಡುಪಿ (26.65 ಚ.ಕಿ.ಮೀ).

ರಾಜ್ಯದ ಏಳು ಪ್ರಮುಖ ನಗರಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ದಶಕದ ಅಂಕಿ ಅಂಶಗಳ ವಿಶ್ಲೇಷಣೆ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 5 ಚದರ ಕಿ.ಮೀ.ನಷ್ಟು ಅರಣ್ಯ ವ್ಯಾಪ್ತಿಯು ಕುಗ್ಗಿದೆ.

ಇದು, ಸುಮಾರು 700 ಫುಟ್‌ಬಾಲ್‌ ಮೈದಾನಕ್ಕೆ ಸರಿಸಮಾನವಾದುದು. 2011 ಮತ್ತು 2021ರ ಅವಧಿಯಲ್ಲಿ ಇಷ್ಟು ಪ್ರಮಾಣದ ಅರಣ್ಯ ಭೂಮಿ ಕುಗ್ಗಿದೆ.

ಈ ನಷ್ಟದ ಹೊರತಾಗಿಯೂ ದಕ್ಷಿಣ ರಾಜ್ಯಗಳ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ 89 ಚದರ ಕಿ.ಮೀ.ನಷ್ಟು ಅರಣ್ಯ ಭೂಮಿ ಇದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದೆಹಲಿ (194 ಚದರ ಕಿ.ಮೀ) ಮತ್ತು ಮುಂಬೈ (111 ಚದರ ಕಿ.ಮೀ.) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT