ಶುಕ್ರವಾರ, ಡಿಸೆಂಬರ್ 3, 2021
26 °C

ಚಳಿಗಾಲಕ್ಕೂ ಮುನ್ನ ಮೋದಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಲಿ: ಪಂಜಾಬ್ ಮಾಜಿ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯವರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಪಂಜಾಬ್‌ನ ಮಾಜಿ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಭಾನುವಾರ ಒತ್ತಾಯಿಸಿದ್ದಾರೆ. ಇದರಿಂದಾಗಿ ರೈತರು ಕಠಿಣ ಚಳಿಗಾಲಕ್ಕೂ ಮುನ್ನ ತಮ್ಮ ಮನೆಗಳಿಗೆ ಮರಳುತ್ತಾರೆ. ಪ್ರತಿಭಟನೆಯ ವೇಳೆ ಈಗಾಗಲೇ ನೂರಾರು ಜನರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂದಿರುವ ರೈತರು ಕಳೆದ ವರ್ಷ ನವೆಂಬರ್ 26ರಿಂದ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿದ್ದು, ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

'ದೇಶವು ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದೆ. ರೈತರು ಒಗ್ಗಟ್ಟಾಗಿ ನಿಂತಿದ್ದಾರೆ ಮತ್ತು ತಮ್ಮ ಧ್ವನಿಯನ್ನು ಕೇಳುವಂತೆ ಒತ್ತಾಯಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾ ನೂರಾರು ರೈತರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ಅಗತ್ಯ ಸೌಲಭ್ಯಗಳಿಲ್ಲದೆ ಮತ್ತು ಶುದ್ಧ ಕುಡಿಯುವ ನೀರಿಲ್ಲದೆ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಅತ್ಯಂತ ದುರದೃಷ್ಟಕರ' ಎಂದು ಹೇಳಿದರು.

'ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತರ್ಕಬದ್ಧ ನಿರ್ಧಾರ ಮಾಡುವವರೆಗೂ ಅವರು ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎನ್ನುವ ಸಂಕಲ್ಪವನ್ನು ಅವರ ಮುಂದುವರಿದ ಸಂಕಷ್ಟದ ಹೋರಾಟವು ಈಗಾಗಲೇ ತೋರಿಸಿದೆ. ಹೀಗಾಗಿ ರೈತರೊಂದಿಗೆ ಮತ್ತೆ ಮಾತುಕತೆ ಆರಂಭಿಸಬೇಕು ಮತ್ತು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಹೀಗಾಗಿ ಅವರು ಚಳಿಗಾಲಕ್ಕೂ ಮುನ್ನ ಮನೆಗೆ ಹಿಂತಿರುಗಬಹುದು' ಎಂದು ಪ್ರಧಾನಿ ನರೇಂದ್ರ ಮೋದಿಯವನ್ನು ಒತ್ತಾಯಿಸಿದರು.

'ಅಲ್ಲದೆ, ಹಬ್ಬಗಳು ಸಮೀಪಿಸುತ್ತಿರುವುದನ್ನು ಪರಿಗಣಿಸಿದರೆ, ಅವರು ತಮ್ಮ ಕುಟುಂಬಗಳೊಂದಿಗೆ ಹಬ್ಬವನ್ನು ಆಚರಿಸುವುದು ನ್ಯಾಯಯುತವಾಗಿರುತ್ತದೆ ಮತ್ತು ರಸ್ತೆಗಳಲ್ಲಿ ಅಲ್ಲ'. ಅವರು ಈ ದೀಪಾವಳಿಯನ್ನು ತಮ್ಮ ಕುಟುಂಬಗಳೊಂದಿಗೆ ಆಚರಿಸಲು ಮತ್ತು ಮುಂಬರುವ ವರ್ಷವನ್ನು ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸ್ವಾಗತಿಸಲು ಸಾಧ್ಯವಾಗಿಸುವುದು ನಮ್ಮ ಮೂಲ ಸಹಾನುಭೂತಿಯಾಗಿದೆ' ಎಂದು ಅವರು ಹೇಳಿದರು.

ಸಮಾಜದ ಕೆಲವು ವರ್ಗಗಳಿಂದ ಹೇಳುವಂತೆ ಮೂರು ಕೃಷಿ ಕಾನೂನುಗಳ ಹಿಂಪಡೆಯುವುದು ಕೇಂದ್ರ ಸರ್ಕಾರದ 'ದೌರ್ಬಲ್ಯ'ವಾಗುವುದಿಲ್ಲ. ಬದಲಿಗೆ ಇದು ಕೇಂದ್ರದ 'ಹೃದಯ ವೈಶಾಲ್ಯತೆ ಮತ್ತು ಉದಾರತೆ'ಯನ್ನು ತೋರಿಸುತ್ತದೆ. ನಮ್ಮ ರೈತರ ಪರವಾಗಿ ಮತ್ತು ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಪ್ರಧಾನಿ ಮೋದಿಯವರನ್ನು ಮನಃಪೂರ್ವಕವಾಗಿ ವಿನಂತಿಸುತ್ತೇನೆ ಎಂದು ಸೋಧಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು