ಗುರುವಾರ , ಅಕ್ಟೋಬರ್ 22, 2020
21 °C
ವಾಜಪೇಯಿ ಸರ್ಕಾರದಲ್ಲಿ ಹಣಕಾಸು, ವಿದೇಶಾಂಗ ಹಾಗೂ ರಕ್ಷಣಾ ಸಚಿವರಾಗಿ ಸೇವೆ

ಕೇಂದ್ರ ಮಾಜಿ ಸಚಿವ ಜಸ್ವಂತ್‌ ಸಿಂಗ್‌ ನಿಧನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಜೆಪಿಯ ಸಂಸ್ಥಾಪಕ ಸದಸ್ಯ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಒಡನಾಡಿ, ಕೇಂದ್ರ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌(82) ಹೃದಯಾಘಾತದಿಂದ ಭಾನುವಾರ ಮುಂಜಾನೆ ಕೊನೆಯುಸಿರೆಳೆದರು.

ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಸಿಂಗ್‌, 2014ರ ಆಗಸ್ಟ್‌ನಲ್ಲಿ ಮನೆಯಲ್ಲಿಯೇ ಕುಸಿದುಬಿದ್ದಿದ್ದರು. ಆ ಸಂದರ್ಭದಲ್ಲಿ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಅಂದು ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘಕಾಲ ಅವರು ಕೋಮಾದಲ್ಲಿದ್ದು, ಗುಣಮುಖರಾಗಿದ್ದ ಅವರನ್ನು ಕಳೆದ ಜೂನ್‌ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ನೆತ್ತರುನಂಜು, ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಿವೃತ್ತ ಮೇಜರ್‌ ಜಸ್ವಂತ್‌ ಸಿಂಗ್ ಅವರು ಭಾನುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯು ತಿಳಿಸಿದೆ. 

ರಾಜಸ್ಥಾನದ ಜೋಧ್‌ಪುರದಲ್ಲಿ ಇರುವ ಫಾರ್ಮ್‌ಹೌಸ್‌ನಲ್ಲಿ ಸಿಂಗ್‌ ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಿತು. ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ಸಿಂಗ್‌ ಅವರ ಪುತ್ರ ಮನ್ವೇಂದ್ರ ಸಿಂಗ್ ನೆರವೇರಿಸಿದರು. ಭಾರತೀಯ ಸೇನೆಯ ಪರವಾಗಿಯೂ ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ‌   

1938ರ ಜನವರಿ 3ರಂದು ರಾಜಸ್ಥಾನದ ಬಾಡ್‌ಮೆರ್‌ ಜಿಲ್ಲೆಯ ಜಾಸೊಲ್‌ ಹಳ್ಳಿಯಲ್ಲಿ ಜನಿಸಿದ್ದ ಸಿಂಗ್‌, ಎಂಟು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯಲು ಇಚ್ಛಿಸಿ, ಸೇನೆಗೆ ನಿವೃತ್ತಿ ಘೋಷಿಸಿದ್ದರು. ಹಲವು ಬಾರಿ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿ ಸಿಂಗ್‌ ಕಾರ್ಯನಿರ್ವಹಿಸಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರಿಗೆ ಆಪ್ತರಾಗಿದ್ದ ಸಿಂಗ್‌, ಹಣಕಾಸು, ವಿದೇಶಾಂಗ ಹಾಗೂ ರಕ್ಷಣಾ ಸಚಿವಾಲಯದ ಜವಾಬ್ದಾರಿ ಹೊತ್ತಿದ್ದರು. 2004ರಿಂದ 2009ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

‘ಸಾರಸಂಗ್ರಹಿ’ ಸಿಂಗ್‌

ಸೇನಾಧಿಕಾರಿಯಾಗಿ, ಲೇಖಕರಾಗಿ, ಕೇಂದ್ರ ಸಚಿವರಾಗಿ ಹೀಗೆ ತಮ್ಮ ಜೀವನಪಥದಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ಜಸ್ವಂತ್‌ ಸಿಂಗ್‌.

ಅದರಲ್ಲೂ 1999ರಲ್ಲಿ ನಡೆದಿದ್ದ ಕಂದಹಾರ್‌ ಅಪಹರಣ ಬಿಕ್ಕಟ್ಟನ್ನು ವಿದೇಶಾಂಗ ಸಚಿವರಾಗಿ ಸಿಂಗ್‌ ನಿಭಾಯಿಸಿದ ರೀತಿ ಎಲ್ಲದಕ್ಕಿಂತಲೂ ಪ್ರಮುಖ. ಘಟನೆಗೆ ಸಂಬಂಧಿಸಿದಂತೆ ಅವರ ಪಾತ್ರ, ತೆಗೆದುಕೊಂಡ ನಿರ್ಧಾರ ಇಂದಿಗೂ ಚರ್ಚೆ ಹಾಗೂ ವಿಶ್ಲೇಷಣೆಗೆ ಕಾರಣವಾಗಿದೆ. 1999ರ ಕ್ರಿಸ್‌ಮಸ್‌ ಮುನ್ನಾ ದಿನ ಸಂಜೆ ದೆಹಲಿಗೆ ಹೊರಟಿದ್ದ 161 ಪ್ರಯಾಣಿಕರಿದ್ದ ಇಂಡಿಯನ್‌ ಏರ್‌ಲೈನ್ಸ್‌(ಐಸಿ 814)‌ ವಿಮಾನವನ್ನು ಕಠ್ಮಂಡುವಿನಿಂದ ಅಪಹರಿಸಿ, ಅಫ್ಗಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿತ್ತು. ‘ಭಾವನಾತ್ಮಕವಾಗಿ ನಾನು ಕುಗ್ಗಿಹೋಗಿದ್ದ ಅವಧಿ ಅದಾಗಿತ್ತು’ ಎಂದು ಈ ಘಟನೆ ಕುರಿತು ಪುಸ್ತಕವೊಂದರಲ್ಲಿ ಸಿಂಗ್‌ ಉಲ್ಲೇಖಿಸಿದ್ದರು.

ಅಪಹರಣಕಾರರ ಜೊತೆ ಸಂಧಾನಕ್ಕೆ ಜೈಶ್‌ ಎ ಮೊಹಮ್ಮದ್‌ ಉಗ್ರಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಸೇರಿದಂತೆ ಮೂವರು ಉಗ್ರರ ಜೊತೆ ಸಿಂಗ್‌ ಕಂದಹಾರ್‌ಗೆ ತೆರಳಿದ್ದರು. ಉಗ್ರರನ್ನು ವೈಯಕ್ತಿಕವಾಗಿ ಕರೆದೊಯ್ದಿದಕ್ಕಾಗಿ ಸಿಂಗ್‌ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ‘150 ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಬಿಡುಗಡೆಗಾಗಿ ಉಗ್ರರನ್ನು ಹಸ್ತಾಂತರಿಸುವ ನಿರ್ಧಾರ ಬಹಳ ಕಠಿಣವಾಗಿತ್ತು. ಮೊದಲಿಗೆ ಯಾವುದೇ ಒಪ್ಪಂದಕ್ಕೆ ನಾನು ಸಿದ್ಧವಿರಲಿಲ್ಲ. ಆದರೆ ಸಮಯ ಉರುಳಿದಂತೆ ನನ್ನ ನಿರ್ಧಾರ ಬದಲಾಯಿತು’ ಎಂದು ತಮ್ಮ ಪುಸ್ತಕದಲ್ಲಿ ಸಿಂಗ್‌ ಉಲ್ಲೇಖಿಸಿದ್ದರು.

ವಿದೇಶಾಂಗ ಸಚಿವರಾಗಿ ಸಿಂಗ್‌ ಕಾರ್ಯನಿರ್ವಹಿಸಿದ 1998ರಿಂದ 2002ರ ಅವಧಿಯೇ ಹೆಚ್ಚಿನ ಚರ್ಚೆಗೆ ಒಳಗಾಗಿದೆ. 1999ರ ಕಾರ್ಗಿಲ್‌ ಯುದ್ಧ, 1998ರಲ್ಲಿ ನಡೆದ ಪೋಖರಣ್‌ ಅಣು ಬಾಂಬ್‌ ಪರೀಕ್ಷೆಯ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನಿರ್ಬಂಧ, 2001ರಲ್ಲಿ ಸಂಸತ್ ಮೇಲೆ ಉಗ್ರರ ದಾಳಿ ಹೀಗೆ ನಿರಂತರವಾದ ಬಿಕ್ಕಟ್ಟಿನ ನಡುವೆಯೂ ಭಾರತವನ್ನು ಯಶಸ್ವಿಯಾಗಿ ಸಿಂಗ್‌ ಮುನ್ನಡೆಸಿದ್ದರು. ಇದರ ಪರಿಣಾಮವಾಗಿಯೇ 2000ನೇ ಇಸವಿಯಲ್ಲಿ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭಾರತಕ್ಕೆ ಭೇಟಿ ನೀಡಿದ್ದರು.

ಅಭಿಪ್ರಾಯಗಳನ್ನು ಹಿಡಿದಿಟ್ಟುಕೊಳ್ಳದ ವ್ಯಕ್ತಿ: ರಾಜಕೀಯ ವಲಯದಲ್ಲಿ ಎಲ್ಲರೊಂದಿಗೂ ಸಿಂಗ್‌ ಉತ್ತಮ ಒಡನಾಟ ಹೊಂದಿದ್ದರು. ಆದರೆ, ತಮ್ಮ ಅಭಿಪ್ರಾಯಗಳನ್ನು ಎಂದಿಗೂ ಮುಚ್ಚಿಡುತ್ತಿರಲಿಲ್ಲ. ಬಿಜೆಪಿ ಸಂಸ್ಥಾಪನೆಯಾದಗಿನಿಂದಲೂ(1980)ಪಕ್ಷದ ಸದಸ್ಯರಾಗಿದ್ದ ಸಿಂಗ್‌ ಅವರನ್ನು ಎರಡು ಬಾರಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. 2009ರಲ್ಲಿ ‘ಜಿನ್ಹಾ–ಇಂಡಿಯಾ, ಪಾರ್ಟಿಷನ್‌, ಇಂಡಿಪೆಂಡೆನ್ಸ್‌’ ಹೆಸರಿನ ಪುಸ್ತಕ ಪ್ರಕಟಿಸಿದ್ದರು. ಕೃತಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್‌ ಅಲಿ ಜಿನ್ಹಾ ಅವರನ್ನು ಸಿಂಗ್‌ ಹೊಗಳಿದ್ದರು. ಇದಕ್ಕಾಗಿ ಸಿಂಗ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದಾದ 10 ತಿಂಗಳಲ್ಲೇ ಅವರು ಪಕ್ಷಕ್ಕೆ ಮರಳಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವಲ್ಲಿ ಎಲ್‌.ಕೆ.ಅಡ್ವಾಣಿ ಅವರ ಪಾತ್ರ ಮಹತ್ವದ್ದಾಗಿತ್ತು. 2014ರಲ್ಲಿ ಟಿಕೆಟ್‌ ದೊರೆಯದ ಕಾರಣಕ್ಕೆ ಪಕ್ಷದ ಆದೇಶವನ್ನು ಉಲ್ಲಂಘಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಸಿಂಗ್‌ ಅವರನ್ನು ಉಚ್ಚಾಟಿಸಲಾಗಿತ್ತು. ಚುನಾವಣೆಯಲ್ಲಿ ಸಿಂಗ್‌ ಸೋತಿದ್ದರು.

ವಿಸ್ಕಿ ಬಾಟಲ್‌ಗೂ ಸಾಲುವುದಿಲ್ಲ: ಹಾಸ್ಯಭರಿತ ಮಾತಿನ ಚಾಟಿಯನ್ನು ಬೀಸುತ್ತಿದ್ದ ಸಿಂಗ್, 2009ರಲ್ಲಿ ಬಜೆಟ್‌ ಮಂಡಿಸಿದ್ದ ಪ್ರಣಬ್‌ ಮುಖರ್ಜಿಯವರನ್ನು ಮಾತಿನಲ್ಲೇ ಕಾಲೆಳೆದಿದ್ದರು. ‘ಹಿರಿಯ ನಾಗರಿಕರಿಗೆ ಸರ್ಕಾರ ನೀಡಿದ ತೆರಿಗೆ ವಿನಾಯಿತಿ, ತನಗೆ ಒಂದು ಬಾಟಲ್‌ ವಿಸ್ಕಿ ಖರೀದಿಸಲೂ ಸಾಲುವುದಿಲ್ಲ’ ಎಂದಿದ್ದರು.

ಲೇಖಕರಾಗಿದ್ದ ಸಿಂಗ್‌, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಭದ್ರತೆ, ಅಂತರಾಷ್ಟ್ರೀಯ ವ್ಯವಹಾರ ಹಾಗೂ ಅಭಿವೃದ್ಧಿ ವಿಷಯಗಳ ಕುರಿತು ಹಲವು ಅಂಕಣಗಳನ್ನು ರಾಷ್ಟ್ರೀಯ ಹಾಗೂ ವಿದೇಶಿ ಪತ್ರಿಕೆಗಳು, ನಿಯತಕಾಲಿಕಗಳಿಗೆ ಅವರು ಬರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು