ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಒಂದು ಕ್ಯಾಬಿನೆಟ್ ದರ್ಜೆ ಬದಲಿಗೆ 4 ರಾಜ್ಯ ಸಚಿವ ಸ್ಥಾನ

ಅಕ್ಷರ ಗಾತ್ರ

ಬೆಂಗಳೂರು: ಬಹುನಿರೀಕ್ಷಿತ ಕೇಂದ್ರದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯು 43 ಮಂದಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತೆರೆ ಕಂಡಿದೆ.

ಯುವಕರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಆಡಳಿತಾತ್ಮಕ ಅನುಭವ ಉಳ್ಳವರ ಮಿಶ್ರಣ ಸಂಪುಟದಲ್ಲಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ, ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರನ್ನು ಸಂಪುಟದಿಂದ ಕೈಬಿಡಲಾಗಿದ್ದು, 4 ಸಂಸದರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.

ಚಿತ್ರದುರ್ಗದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಎ. ನಾರಾಯಣಸ್ವಾಮಿಯವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದೆ. ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.

ಸದ್ಯ, ರಾಜ್ಯದಿಂದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಇಲ್ಲಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ನಿಧನದ ಬಳಿಕ ರಸಗೊಬ್ಬರ ಖಾತೆಯನ್ನು ಸದಾನಂದಗೌಡರಿಗೆ ವಹಿಸಲಾಗಿತ್ತು. ರೈಲ್ವೆ, ಕಾನೂನು, ಸಾಂಖ್ಯಿಕ ಮತ್ತು ರಸಗೊಬ್ಬರ ಖಾತೆಗಳನ್ನು ನಿರ್ವಹಿಸಿರುವ ಸದಾನಂದಗೌಡರನ್ನು ಸಂಪುಟದಿಂದ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ.

ಉದ್ಯಮಿಗೆ ಅರಸಿ ಬಂದ ಅವಕಾಶ
ಬೆಂಗಳೂರು:
ಉದ್ಯಮಿ ರಾಜೀವ್‌ ಚಂದ್ರಶೇಖರ್ ಅವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಕೇರಳ ಮೂಲದವರಾದರೂ ಬೆಂಗಳೂರು ವಾಸಿ.

-ರಾಜೀವ್‌ ಚಂದ್ರಶೇಖರ್
-ರಾಜೀವ್‌ ಚಂದ್ರಶೇಖರ್

ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ (ಬಿ.ಇ), ಅಮೆರಿಕಾದ ಇಲಿನಾಯ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಎಸ್‌ ಪದವಿ ಪಡೆದಿದ್ದಾರೆ.

ಇಂಟೆಲ್‌ ಕಂಪನಿಯಅಮೆರಿಕ ಕಚೇರಿಯಲ್ಲಿ ಮೈಕ್ರೋ ಪ್ರೊಸೆಸರ್‌ ತಂಡದಲ್ಲಿ ಎಂಜಿನಿಯರ್‌ ಆಗಿ ವೃತ್ತಿಯನ್ನು ಆರಂಭಿಸಿದರು. 1991ರಲ್ಲಿ ಭಾರತಕ್ಕೆ ಮರಳಿದ ಅವರು, 1994 ರಲ್ಲಿ ಭಾರತದಲ್ಲಿ ಬಿಪಿಎಲ್‌ ಮೊಬೈಲ್‌ ಕಂಪನಿ ಆರಂಭಿಸಿದರು. ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆಯ ಜತೆಗೆ ವಿವಿಧ ಉದ್ಯಮಗಳನ್ನು ಆರಂಭಿಸಿದರು. ಏಷ್ಯಾ ನೆಟ್‌ ಮಾಧ್ಯಮ ಗುಂಪಿನ ಮಾಲೀಕರೂ ಆಗಿದ್ದಾರೆ.

2009–10 ರಲ್ಲಿ ಬೆಂಗಳೂರಿನ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಾಗಿ ಕೆಲಸ ಮಾಡಿದ್ದು, ಬೆಂಗಳೂರು ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಪಡೆ ಸಮನ್ವಯಕಾರರಾಗಿ ‘ಪ್ಲಾನ್‌ ಬೆಂಗಳೂರು–2020 ಮುನ್ನೋಟ ಬೆಂಗಳೂರು’ ರೂಪಿಸಿದರು. ಬೆಂಗಳೂರು ಫೌಂಡೇಶನ್‌ ಮೂಲಕ ಕೆರೆ ಒತ್ತುವರಿ ತೆರವು ಚಟುವಟಿಕೆ, ವಸತಿ ಪ್ರದೇಶಗಳ ರಕ್ಷಣೆ, ಪರಿಸರ ಸಂರಕ್ಷಣೆ ಕೆಲಸಗಳನ್ನೂ ಮಾಡುತ್ತಾ ಬಂದಿದ್ದಾರೆ.

**
ಅದೃಷ್ಟಶಾಲಿ ರಾಜಕಾರಣಿ ಭಗವಂತ ಖೂಬಾ
ಬೀದರ್:
ಬೀದರ್‌ ಕ್ಷೇತ್ರದಿಂದ ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಭಗವಂತ ಖೂಬಾ (54) ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

ಖೂಬಾ ಅವರು 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಮೆಟ್ಟಿಲು ಹತ್ತಿದ್ದರು. ಎರಡನೇ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಪರಾಭವಗೊಳಿಸಿ ಗೆದ್ದಿದ್ದಾರೆ.

ಜಿಲ್ಲೆಯ ರಾಜಕಾರಣದಲ್ಲಿ ಖೂಬಾ ‘ಅದೃಷ್ಟಶಾಲಿ ರಾಜಕಾರಣಿ’ ಎಂದೇ ಗುರುತಿಸಿಕೊಂಡಿದ್ದಾರೆ. ನೇರವಾಗಿ ಲೋಕಸಭೆ ಚುನಾವಣೆಗೇ ಸ್ಪರ್ಧಿಸಿ ಆಯ್ಕೆಯಾದ ಹಿರಿಮೆ ಅವರದ್ದು. ಇದೀಗ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಜಿಲ್ಲೆಯ ಮೊದಲಿಗ ಎನಿಸಿಕೊಂಡಿದ್ದಾರೆ. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಔರಾದ್‍ನ ಮಹಾದೇವಿ ಹಾಗೂ ಗುರುಬಸಪ್ಪ ಖೂಬಾ ಅವರ ಪುತ್ರರಾಗಿ1968ರ ಜೂನ್ 1ರಂದು ಜನಿಸಿದ ಭಗವಂತ ಖೂಬಾ, ತುಮಕೂರಿನ ಸಿದ್ಧಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಗುತ್ತಿಗೆದಾರರಾಗಿದ್ದ ಅವರು, 1991ರಲ್ಲಿ ಲಾಲಕೃಷ್ಣ ಅಡ್ವಾಣಿ ಅವರು ಬೀದರ್‌ಗೆ ಬಂದಿದ್ದ ವೇಳೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಹಲವು ಹೊಸ ರೈಲುಗಳು, ರಾಷ್ಟ್ರೀಯ ಹೆದ್ದಾರಿಗಳ ಮಂಜೂರಾತಿ ಪಡೆಯವುದು ಸೇರಿದಂತೆ ವಿವಿಧ ಕಾರ್ಯಗಳ ಮೂಲಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಈಚೆಗೆ ನಡೆದ ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಪಕ್ಷದ ಅಭ್ಯರ್ಥಿಯಾಗಿದ್ದ ಶರಣು ಸಲಗರ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

**
ಮೊದಲ ಅವಧಿಯಲ್ಲೇ ಸಚಿವ ಸ್ಥಾನ
ಚಿತ್ರದುರ್ಗ
: ಸಂಸದರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಹೆಗ್ಗಳಿಕೆ ಎ. ನಾರಾಯಣಸ್ವಾಮಿ ಅವರದು. ಈ ಅವಕಾಶ ಅವರನ್ನು ಅನಿರೀಕ್ಷಿತವಾಗಿ ಆರಸಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ನಿವಾಸಿಯಾದ ಇವರು ಕೃಷಿ, ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. 2019ರಲ್ಲಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಇವರು ಸಂಘ ಪರಿವಾರದ ನಾಯಕರಿಗೂ ಆಪ್ತರು. ರಾಜ್ಯ ಕಿಸಾನ್‌ ಮೋರ್ಚಾದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1996ರಲ್ಲಿ ಆನೇಕಲ್‌ ಪುರಸಭೆ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದರು. ಮರು ವರ್ಷವೇ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆನೇಕಲ್‌ ವಿಧಾನಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. 2010ರಿಂದ 2013ರ ವರೆಗೆ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದಾರೆ. 64 ವರ್ಷದ ನಾರಾಯಣಸ್ವಾಮಿ ಬಿ.ಎ ಪದವೀಧರರು. ಇವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT