ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಯವಿಟ್ಟು ಹೊರಗೆ ಬನ್ನಿ': ಉಗ್ರನ ಶರಣಾಗತಿಗೆ ಗೋಗರೆದ 4 ವರ್ಷದ ಮಗ

Last Updated 24 ಮಾರ್ಚ್ 2021, 4:32 IST
ಅಕ್ಷರ ಗಾತ್ರ

ಶ್ರೀನಗರ: 'ದಯವಿಟ್ಟು ಹೊರಗೆ ಬನ್ನಿ, ನಾನು ನಿಮ್ಮ ನಿರೀಕ್ಷೆಯಲ್ಲಿದ್ದೇನೆ’ಎಂದು ಕಾಶ್ಮೀರದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರನಿಗೆ ಆತನ 4 ವರ್ಷದ ಮಗ ಮನವಿ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ವೇಳೆ ಒಬ್ಬ ಉಗ್ರನ ಶರಣಾಗತಿಗೆ ಮನವೊಲಿಸಲು ಆತನ ಕುಟುಂಬ ಸದಸ್ಯರನ್ನು ಕರೆ ತರಲಾಗಿತ್ತು.

ಈ ಸಂದರ್ಭ ‘ದಯವಿಟ್ಟು ಹೊರಗೆ ಬನ್ನಿ, ಅವರು ನಿಮಗೆ ಏನೂ ಮಾಡುವುದಿಲ್ಲ. ನಾನು ನಿಮ್ಮ ನಿರೀಕ್ಷೆಯಲ್ಲಿದ್ದೇನೆ’ಎಂದು ಉಗ್ರನ ಪುತ್ರ, 4 ವರ್ಷದ ಬಾಲಕ ಮನವಿ ಮಾಡುತ್ತಿರುವ ವಿಡಿಯೊ ಮನಕಲಕುತ್ತಿದೆ.

ತನ್ನ ಮಗನ ಮನವಿ ಕೇಳಿದ ಬಳಿಕವೂ ಉಗ್ರ ಅಡಗಿ ಕುಳಿತಿದ್ದ ಮನೆಯಿಂದ ಹೊರಬರಲು ನಿರಾಕರಿಸಿದ್ದಾನೆ. 25 ವರ್ಷದ ಉಗ್ರ ಅಕ್ವಿಬ್ ಅಹ್ಮದ್ ಮಲಿಕ್ ಮೂರು ತಿಂಗಳ ಹಿಂದಷ್ಟೆ ಕಾಶ್ಮೀರದಲ್ಲಿ ಉಗ್ರರ ಗುಂಪು ಸೇರಿಕೊಂಡಿದ್ದನು. ಅಂತಿಮವಾಗಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಅಕ್ವಿಬ್ ಸೇರಿ ನಾಲ್ವರು ಉಗ್ರರನ್ನು ಸೇನೆ ಕೊಂದು ಹಾಕಿತ್ತು.

ಕಾರ್ಯಾಚರಣೆಯ ಮಧ್ಯದಲ್ಲಿ ಲೌಡ್ ಸ್ಪೀಕರ್‌ಗಳನ್ನು ತಂದಿದ್ದ ಸೇನಾ ಸಿಬ್ಬಂದಿ, ಉಗ್ರನ ಕುಟುಂಬದ ಮೂಲಕ ಆತನ ಶರಣಾಗತಿಗೆ ಮನವಿ ಮಾಡಿಸಿತ್ತು

4 ವರ್ಷದ ಮಗನ ಬಳಿಕ ಉಗ್ರನ ಪತ್ನಿ ಸಹ ಮನವಿ ಮಾಡಿದ್ದರು.

‘ದಯವಿಟ್ಟು ಹೊರಗೆ ಬಂದು ಶರಣಾಗಿ. ನೀವು ಹೊರಗೆ ಬರಲು ಬಯಸದಿದ್ದರೆ ದಯವಿಟ್ಟು ನನ್ನನ್ನು ಶೂಟ್ ಮಾಡಿ. ನಮ್ಮ ಮಕ್ಕಳೂ ನನ್ನೊಂದಿಗೆ ಬಂದಿದ್ದಾರೆ. ಹೊರಗೆ ಬಂದು ಶರಣಾಗಿ ’ಎಂದು ಉಗ್ರ ಅಕ್ವಿಬ್‌ನ ಪತ್ನಿ ಧ್ವನಿವರ್ಧಕದಲ್ಲಿ ಗೋಗರೆದಿದ್ದರು.

ಆದರೆ, ಕುಟುಂಬದ ಯಾರೊಬ್ಬರ ಮನವಿಗೂ ಉಗ್ರ ಸ್ಪಂದಿಸದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ ಭದ್ರತಾ ಸಿಬ್ಬಂದಿ, ಅಕ್ವಿಬ್ ಸೇರಿ ಅಡಗಿ ಕುಳಿತಿದ್ದ ನಾಲ್ವರೂ ಉಗ್ರರನ್ನು ಹೊಡೆದುರುಳಿಸಿತ್ತು.

‘ಉಗ್ರನ ಹೆಂಡತಿ ಮತ್ತು ಮಗು ಆತನಿಗೆ ಶರಣಾಗುವಂತೆ ಮನವಿ ಮಾಡಿದರು. ಅಕ್ವಿಬ್ ಶರಣಾಗತಿಗೆ ಇಚ್ಛಿಸಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವನ ಸಹಚರರು ಅವನನ್ನು ತಡೆದರು’ ಎಂದು ಭಾರತೀಯ ಸೇನೆಯ ವಿಕ್ಟರ್ ಫೋರ್ಸ್‌ನ ಮೇಜರ್ ಜನರಲ್ ರಶೀಮ್ ಬಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT