ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆ, ಅತ್ಯಾಚಾರ ಸಂತ್ರಸ್ತೆ ತಾಯಿ: ಇಲ್ಲಿದೆ ಕೈ ಅಭ್ಯರ್ಥಿ ಪಟ್ಟಿ

Last Updated 14 ಜನವರಿ 2022, 10:28 IST
ಅಕ್ಷರ ಗಾತ್ರ

ಲಖನೌ: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿ, ಸಿಎಎ ವಿರೋಧಿ ಕಾರ್ಯಕರ್ತೆ ಸದಾಫ್ ಜಾಫರ್, ಬುಡಕಟ್ಟು ನಾಯಕ ರಾಮರಾಜ್ ಗೊಂಡ್ ಮತ್ತು ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಬಿಡುಗಡೆ ಮಾಡಿದರು.

ಪ್ರಿಯಾಂಕಾ ಅವರು ಈ ಹಿಂದೆ ಭರವಸೆ ನೀಡಿದಂತೆ, 50 ಮಹಿಳೆಯರಿಗೆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಮಹಿಳೆಯರ ಪಾಲು ಶೇ 40ರಷ್ಟು ಆಗಿದೆ.

‘ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ದುರ್ಬಲ ವರ್ಗದ ಹಕ್ಕುಗಳ ಮರುಸ್ಥಾಪನೆಗಾಗಿ ಹೋರಾಡಿದವರಿಗೆ ಕಾಂಗ್ರೆಸ್‌ ಆದ್ಯತೆ ನೀಡಿದೆ. ನಮ್ಮ ಅಭ್ಯರ್ಥಿಗಳು ಸಾಮಾಜಿಕ ನ್ಯಾಯದ ಧ್ವನಿ. ಉತ್ತರ ಪ್ರದೇಶವನ್ನು ಅವರು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಾರೆ' ಎಂದು ಅವರು ವಿಶ್ವಾಸದಿಂದ ಹೇಳಿದರು.


‘ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ನಾವು ಟಿಕೆಟ್‌ ಕೊಟ್ಟಿದ್ದೇವೆ. ಅತ್ಯಾಚಾರದ ಆರೋಪ ಹೊತ್ತಿದ್ದ ಅಂದಿನ ಆಡಳಿತ ಪಕ್ಷದ ಶಾಸಕನನ್ನು ಅವರು ಎದುರಿಸುವ ಧೈರ್ಯ ಮಾಡಿದ್ದರು. ಶಹಜಹಾನ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಸಾರ್ವಜನಿಕ ಸಭೆಯಲ್ಲಿ ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಅವರು ಧೈರ್ಯದಿಂದ ಬಾಕಿ ಕೇಳಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಹಲ್ಲೆಗೊಳಗಾಗಿದ್ದರು’ ಎಂದು ಪ್ರಿಯಾಂಕಾ ತಿಳಿಸಿದರು.

ಲಖನೌ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಸದಾಫ್ ಜಾಫರ್ ಅವರು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ಸರ್ಕಾರದಿಂದ ಕಿರುಕುಳ ಅನುಭವಿಸಿದವರು. ಇನ್ನು, ಸೋನೆಭದ್ರಾ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಹತ್ಯಾಕಾಂಡ ವಿರುದ್ಧ ರಾಮರಾಜ್ ಗೊಂಡ್ ಅವರು ಮೇಲ್ಜಾತಿಗಳಿಗೆ ಸಡ್ಡು ಹೊಡೆದಿದ್ದರು’ ಎಂದು ಪ್ರಿಯಾಂಕಾ ತಮ್ಮ ಅಭ್ಯರ್ಥಿಯನ್ನು ಪರಿಚಿಯಿಸಿದರು.
ಆರಾಧನಾ ಮಿಶ್ರಾ, ಪಂಖ್ರಿ ಪಾಠಕ್, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಮತ್ತು ಟಿವಿ ಪತ್ರಕರ್ತೆ ನಿದಾ ಅಹ್ಮದ್ ಕಾಂಗ್ರೆಸ್‌ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಪ್ರಮುಖರು. ಇವರೆಲ್ಲ ಸಂಭಾಲ್‌ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.


‘ನಾವು ಉತ್ತರ ಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯವನ್ನು ಪ್ರಾರಂಭಿಸಲು ಬಯಸುತ್ತೇವೆ. ನಮ್ಮ ಪ್ರಚಾರವು ಸಕಾರಾತ್ಮಕವಾಗಿರುತ್ತದೆ. ಸಾಮಾನ್ಯ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ನಾವು ಚುನಾವಣೆಯಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು ಪ್ರಿಯಾಂಕಾ.

ಮುಂಬರುವ ಚುನಾವಣೆಯಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾ ಅವರ ವಿಶ್ವಾಸ ಗಳಿಸುವ ಪ್ರಯತ್ನವನ್ನು ಪ್ರಿಯಾಂಕಾ ಮಾಡುತ್ತಿದ್ದಾರೆ.

ಕಾಂಗ್ರೆಸ್ ರಾಜ್ಯದ ವಿವಿಧ ಭಾಗಗಳಲ್ಲಿ 'ಮಹಿಳಾ ಮ್ಯಾರಥಾನ್'ಗಳನ್ನು ಈ ಹಿಂದೆ ಆಯೋಜಿಸಿತ್ತು. ಇದು ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು. ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 40ರಷ್ಟು ಮೀಸಲಾತಿ ನೀಡುವುದಾಗಿಯೂ, ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯನ್ನು ನಿಯೋಜಿಸುವುದಾಗಿಯೂ, ಪ್ರತಿ ಹಳ್ಳಿಯಲ್ಲಿ ಮಹಿಳಾ ಚೌಪಾಲ್ (ಮಹಿಳೆಯರು – ಪೊಲೀಸರ ನಡುವೆ ಸಂವಹನ) ಸ್ಥಾಪಿಸುವುದಾಗಿಯೂ ಪ್ರಿಯಾಂಕಾ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT