ಜಾಗತಿಕ ಸಂಘರ್ಷ–ಹವಾಮಾನ ಬಿಕ್ಕಟ್ಟಿಗೂ ಗಾಂಧಿ ತತ್ವದಲ್ಲಿದೆ ಪರಿಹಾರ: ಮೋದಿ

ದಿಂಡಿಗಲ್ (ತಮಿಳುನಾಡು) : ‘ಹವಾಮಾನ ಬಿಕ್ಕಟ್ಟು ಸೇರಿ ಆಧುನಿಕ ದಿನದ ಸವಾಲುಗಳಿಗೆ ಮಹಾತ್ಮ ಗಾಂಧಿಯವರ ವಿಚಾರಧಾರೆಗಳಲ್ಲಿ ಪರಿಹಾರಗಳಿವೆ. ಸ್ವಾವಲಂಬನೆ ಗುರಿಯತ್ತ ಸಾಗುವ ನಮ್ಮ ಸರ್ಕಾರದ ‘ಆತ್ಮನಿರ್ಭರ್ ಭಾರತ್’ ಕೂಡ ಗಾಂಧೀಜಿಯವರಿಂದ ಸ್ಫೂರ್ತಿ ಪಡೆದಿದೆ’ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಇಲ್ಲಿನ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 35ನೇ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗಾಂಧೀಜಿಯವರ ಮೌಲ್ಯಗಳು ಅತ್ಯಂತ ಪ್ರಸ್ತುತವಾಗುತ್ತಿವೆ. ಜಾಗತಿಕ ಸಂಘರ್ಷಗಳನ್ನು ಅಥವಾ ಹವಾಮಾನ ಬಿಕ್ಕಟ್ಟನ್ನು ಕೊನೆಗೊಳಿಸಲು ಹಾಗೂ ಇಂದಿನ ಸವಾಲುಗಳಿಗೆ ಗಾಂಧೀಜಿಯವರ ಚಿಂತನೆಗಳಲ್ಲಿ ಪರಿಹಾರಗಳಿವೆ. ಗಾಂಧೀಜಿಯವರ ಜೀವನವಿಧಾನ ಅನುಸರಿಸುವ ವಿದ್ಯಾರ್ಥಿಗಳಾದರೆ, ಬದುಕಿನಲ್ಲಿ ಮಹತ್ವದ ಅವಕಾಶಗಳೂ ಲಭಿಸುತ್ತವೆ. ಸಮಾಜದ ಮೇಲೂ ಉತ್ತಮ ಪ್ರಭಾವ ಬೀರಬಹುದು’ ಎಂದು ಹೇಳಿದರು.
ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಹಳ್ಳಿಗಳ ಪ್ರಗತಿಯ ಜತೆಗೆ ಗ್ರಾಮೀಣ ಜೀವನದ ಮೌಲ್ಯಗಳನ್ನು ಸಂರಕ್ಷಿಸಲು ಆದ್ಯತೆ ನೀಡಿದ್ದರು. ಗಾಂಧೀಜಿಯವರಿಗೆ ನಾವು ನಿಜವಾಗಿ ಸಲ್ಲಿಸುವ ಗೌರವವೆಂದರೆ ಅವರ ಚಿಂತನೆಗಳಿಗೆ ಅನುಸಾರ ಹೃದಯಕ್ಕೆ ಹತ್ತಿರವಾಗಿ ಕರ್ತವ್ಯ ನಿರ್ವಹಿಸುವುದಾಗಿದೆ. ಕೇಂದ್ರ ಸರ್ಕಾರ ಕೂಡ ಗಾಂಧಿ ಚಿಂತನೆಗಳ ಪ್ರೇರಣೆಯಿಂದ ‘ಆತ್ಮನಿರ್ಭರ್‌ಭಾರತ್’ಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.
ದೀರ್ಘ ಸಮಯದಿಂದ ಖಾದಿಯನ್ನು ನಿರ್ಲಕ್ಷಿಸಲಾಗಿತ್ತು. ಆದರೆ, ನಾವು ‘ದೇಶಕ್ಕಾಗಿ ಖಾದಿ ಮತ್ತು ಫ್ಯಾಷನ್‌ಗಾಗಿ ಖಾದಿ’ಗೆ ಕರೆಕೊಟ್ಟೆವು. ಈ ಘೋಷಣೆ ಜನಪ್ರಿಯವಾಗಿದ್ದು, ಕಳೆದ ಎಂಟು ವರ್ಷಗಳಿಂದ ಖಾದಿ ಉತ್ಪನ್ನಗಳ ಮಾರಾಟವೂ ಶೇ 300ರಷ್ಟು ಹೆಚ್ಚಾಗಿದೆ. ಪರಿಸರ ಸ್ನೇಹಿಯಾಗಿರುವ ಖಾದಿಯು ಜಾಗತಿಕವಾಗಿಯೂ ಫ್ಯಾಷನ್ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ’ ಎಂದು ಮೋದಿ ಹೇಳಿದರು.
ಸಮಾವೇಶದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.