ಸೋಮವಾರ, ಅಕ್ಟೋಬರ್ 19, 2020
26 °C

ಮೋದಿ ಆಸ್ತಿ ಸ್ವಲ್ಪ ಹೆಚ್ಚಳ, ಯಾವುದೇ ಸಾಲ-ವಾಹನ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಕಳೆದ ಒಂದು ವರ್ಷದಲ್ಲಿ ₹36 ಲಕ್ಷ ಏರಿಕೆಯಾಗಿದೆ. ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿಯಿಂದ ಬಂದ ವರಮಾನದಿಂದ ಅವರ ಸಂಪತ್ತು ₹2.49 ಕೋಟಿಯಿಂದ ₹2.85 ಕೋಟಿಗೆ ವೃದ್ಧಿಸಿದೆ. 

ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಕೆಯಾಗಿರುವ ಆಸ್ತಿ ವಿವರದಲ್ಲಿ ಈ ಮಾಹಿತಿ ಇದೆ. ವೆಬ್‌ಸೈಟ್‌ನಲ್ಲಿ ನಮೂದಾಗಿರುವ ಮಾಹಿತಿ ಪ್ರಕಾರ, ಮೋದಿ ಅವರಿಗೆ ಹೂಡಿಕೆಯಿಂದ ₹33 ಲಕ್ಷ ಹಾಗೂ ಠೇವಣಿಯಿಂದ ₹3.30 ಲಕ್ಷ ಆದಾಯ ಬಂದಿದೆ. ಪ್ರಧಾನಿ ಹೆಸರಲ್ಲಿ ಯಾವುದೇ ಸಾಲ ಮತ್ತು ವಾಹನ ಇಲ್ಲ. ಅವರ ಬಳಿ ಇರುವ ನಗದು ₹31,450. ₹1.51 ಲಕ್ಷ ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು ಇವೆ. ₹1.10 ಕೋಟಿ ಮೌಲ್ಯದ ಆಸ್ತಿ ಗುಜರಾತ್‌ನ ಗಾಂಧಿನಗರದಲ್ಲಿ ಇದೆ. 

2019ರ ಮಾರ್ಚ್‌ನಲ್ಲಿ ಮೋದಿ ಅವರ ಉಳಿತಾಯ ಖಾತೆಯಲ್ಲಿ ₹4,143 ಇತ್ತು. ಅದು 2019ರ
ಜೂನ್‌ ವೇಳೆಗೆ ₹3.38 ಲಕ್ಷಕ್ಕೆ ಏರಿಕೆಯಾಗಿದೆ. ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿರುವ ನಿಶ್ಚಿತ ಠೇವಣಿಯ ಮೊತ್ತ ₹1.27 ಕೋಟಿಯಿಂದ ₹1.60 ಕೋಟಿಗೆ ಹೆಚ್ಚಳವಾಗಿದೆ.  

₹1.75 ಕೋಟಿ ಮೌಲ್ಯದ ಚರಾಸ್ತಿ ಹೊಂದಿರುವ ಮೋದಿ ಅವರು 2012ರಲ್ಲಿ ಎಲ್‌ ಎಂಡ್‌ ಟಿ ಇನ್‌ಫ್ರಾಸ್ಟ್ರಕ್ಚರ್‌ನ ₹20,000 ಮೌಲ್ಯದ ಬಾಂಡ್‌ ಖರೀದಿಸಿದ್ದರು. ₹8.43 ಲಕ್ಷ ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರ ಹೊಂದಿದ್ದಾರೆ. ₹1.50 ಲಕ್ಷ ಮೊತ್ತದ ಜೀವವಿಮೆಯನ್ನೂ ಖರೀದಿಸಿದ್ದಾರೆ. 

ಹಸು, ಎಮ್ಮೆ, ಚೇತಕ್ ಸ್ಕೂಟರ್!: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಬಜಾಜ್ ಚೇತಕ್ ಸ್ಕೂಟರ್ ಇದೆ. ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರ ಬಳಿ 16 ಹಸು, 13 ಎಮ್ಮೆ ಹಾಗೂ 6,293 ಮರಗಳಿವೆ. ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ಸಿಂಗ್ ಪುರಿ ಅವರ ಪತ್ನಿ ಸ್ವಿಟ್ಜರ್ಲೆಂಡ್‌ನಲ್ಲಿ ಫ್ಲ್ಯಾಟ್ ಹೊಂದಿದ್ದಾರೆ. ಮಾರುಕಟ್ಟೆ ಏರಿಳಿತದಿಂದಾಗಿ ಗೃಹಸಚಿವ ಅಮಿತ್ ಶಾ ಅವರ ಆಸ್ತಿ ಮೌಲ್ಯ ಕೊಂಚ ಕರಗಿದೆ.

– ಇವು ಪ್ರಧಾನಿ ಕಚೇರಿಗೆ ಸಲ್ಲಿಸಿದ ಸಚಿವರ ಆಸ್ತಿ ಮಾಹಿತಿಯಲ್ಲಿರುವ ಕೆಲವು ಅಂಶಗಳು.  

ಅಮಿತ್ ಶಾ: ಗೃಹಸಚಿವರು ಹೊಂದಿದ್ದ ಷೇರುಗಳ ಮೌಲ್ಯ ₹17.9 ಕೋಟಿಯಿಂದ ₹13.5 ಕೋಟಿಗೆ ಕುಸಿದಿರುವ ಕಾರಣ ಅವರ ಆಸ್ತಿ ₹32.30 ಕೋಟಿಯಿಂದ ₹28.63 ಕೋಟಿಗೆ ಇಳಿಕೆಯಾಗಿದೆ. ಅವರ ಪತ್ನಿ ಸೋನಲ್‌ ಅವರ ಸಂಪತ್ತು ಒಂಬತ್ತು ಕೋಟಿ ರೂಪಾಯಿಯಿಂದ ₹8.53 ಕೋಟಿಗೆ ಕುಸಿದಿದೆ. 

ಶಾ ಅವರು ₹15.77 ಲಕ್ಷ ಸಾಲ ಹೊಂದಿದ್ದಾರೆ. ತಾಯಿಯಿಂದ ₹7.85 ಕೋಟಿ ಮೌಲ್ಯದ ಆಸ್ತಿ ಬಂದಿದೆ. ಶಾ ದಂಪತಿ ಒಟ್ಟಾಗಿ ₹1.21 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. 

ನಿರ್ಮಲಾ: ಹಣಕಾಸು ಸಚಿವೆಯ ಆಸ್ತಿ ಮೌಲ್ಯ ₹1.33 ಕೋಟಿ. 315 ಗ್ರಾಂ ಚಿನ್ನಾಭರಣ ಮತ್ತು 2 ಕೆಜಿ ಬೆಳ್ಳಿ, ತೆಲಂಗಾಣದಲ್ಲಿರುವ ₹1.15 ಕೋಟಿ ಮೌಲ್ಯದ ಆಸ್ತಿ ಇದರಲ್ಲಿ ಸೇರಿವೆ. ₹28 ಸಾವಿರ ಮೌಲ್ಯದ ಬಜಾಜ್ ಚೇತಕ್ ಸ್ಕೂಟರ್ ಇದೆ. 19 ವರ್ಷದ ಗೃಹಸಾಲ, ಒಂದು ವರ್ಷದ ಓವರ್‌ಡ್ರಾಫ್ಟ್‌ ಮತ್ತು 10 ವರ್ಷದ ಅಡಮಾನ ಸಾಲ ಹೊಂದಿದ್ದಾರೆ. 

ಸಿರಿವಂತ ಸಚಿವ: ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಮೋದಿ ನೇತೃತ್ವದ ಸಚಿವ ಸಂಪುಟದ ಸಿರಿವಂತ ಸಚಿವ ಎನಿಸಿದ್ದಾರೆ. ₹78.27 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಪತ್ನಿ ಸೀಮಾ ಅವರ ಆಸ್ತಿ ₹50.34 ಕೋಟಿ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಸ್ತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ₹4.94 ಕೋಟಿ ಮೌಲ್ಯದ ಆಸ್ತಿ ಇದ್ದರೂ, ಷೇರು, ಪಿಂಚಣಿ ಅಥವಾ ವಿಮೆಯಲ್ಲಿ ಹಣ ತೊಡಗಿಸಿಲ್ಲ. ರಿವಾಲ್ವರ್ ಹಾಗೂ 2 ಪೈಪ್ ಗನ್‌ ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು