ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ-ಮಿಜೋರಾಂ ಸಂಘರ್ಷ: ಗಡಿ ಮರುವಿಂಗಡಣೆಯೇ ಪರಿಹಾರ-ಬಿಜೆಪಿ ನಾಯಕರ ಪ್ರತಿಪಾದನೆ

Last Updated 27 ಜುಲೈ 2021, 19:31 IST
ಅಕ್ಷರ ಗಾತ್ರ

ನವದೆಹಲಿ/ಗುವಾಹಟಿ: ಅಸ್ಸಾಂ ಜತೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಗಡಿಗಳನ್ನು ಮರುವಿಂಗಡಣೆ ಮಾಡುವುದೇ ಗಡಿ ಸಂಘರ್ಷಕ್ಕೆ ಕೊನೆಹಾಡಲು ಪರಿಣಾಮಕಾರಿ ಪರಿಹಾರ ಮಾರ್ಗ ಎಂದು ಬಿಜೆಪಿ ಮುಖಂಡ ಎಂ.ಕಿಕೋನ್ ಹೇಳಿದ್ದಾರೆ. ನಾಗಾಲ್ಯಾಂಡ್‌ ಶಾಸಕರಾಗಿರುವ ಕಿಕೋನ್ ಅವರು, ಮಿಜೋರಾಂನ ಬಿಜೆಪಿ ಉಸ್ತುವಾರಿಯೂಆಗಿದ್ದಾರೆ.

ಅಸ್ಸಾಂ ರಾಜ್ಯವು ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಮಿಜೋರಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳ ಜತೆ ಗಡಿ ತಕರಾರು ಹೊಂದಿದೆ. ಈ ಎಲ್ಲಾ ರಾಜ್ಯಗಳು ತಮ್ಮ ಗಡಿಯನ್ನು ಒತ್ತುವರಿ ಮಾಡಿವೆ ಎಂದು ಅಸ್ಸಾಂ ಆರೋಪಿಸಿದೆ. ಈ ಸಂಬಂಧ ಈ ಮೂರೂ ರಾಜ್ಯಗಳ ಜತೆಗೆ ಅಸ್ಸಾಂ ಸಂಘರ್ಷ ನಡೆಸಿದೆ. ಇದೇ ಮೇನಲ್ಲಿ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಸಂಘರ್ಷ ನಡೆದಿತ್ತು. ಈ ಸಂಘರ್ಷದಲ್ಲಿ ಎರಡೂಕಡೆಯ ಹಲವು ಪೊಲೀಸರು ಗಾಯಗೊಂಡಿದ್ದರು.ಮೇಘಾಲಯದ ಜತೆ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರು ಘರ್ಷಣೆ ನಡೆಸಿದ್ದಾರೆ. ಈ ಎಲ್ಲಾ ಸಂಘರ್ಷಗಳನ್ನು ಕೊನೆಹಾಡಲು, ಗಡಿ ಮರುವಿಂಗಡಣೆಯೇ ಉಳಿದಿರುವ ಏಕೈಕ ಮಾರ್ಗ ಎಂದು ಕಿಕೋನ್ ಪ್ರತಿಪಾದಿಸಿದ್ದಾರೆ.

ಗಡಿ ಸಮಸ್ಯೆ ಕುರಿತು ಈ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಜತೆಗೆ ಶನಿವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಾಂತಿ ಮಾತುಕತೆ ನಡೆಸಿದ್ದರು. ಮಾತುಕತೆ ನಡೆದ ಎರಡು ದಿನಗಳ ನಂತರ ಅಸ್ಸಾಂ ಪೊಲೀಸರು ಮತ್ತು ಗಡಿ ಜಿಲ್ಲೆಗಳಜಿಲ್ಲಾಧಿಕಾರಿಗಳು ಮಿಜೋರಾಂ ಮತ್ತು ಮೇಘಾಲಯ ಗಡಿಗಳಲ್ಲಿ ಒತ್ತುವರಿ ಆಗಿದೆ ಎನ್ನಲಾದ ಪ್ರದೇಶಗಳನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಮಿಜೋರಾಂ ಪೊಲೀಸರೊಂದಿಗೆ ನಡೆದ ಸಂಘರ್ಷದಲ್ಲಿ ಅಸ್ಸಾಂ ಪೊಲೀಸ್‌ನ ಆರು ಸಿಬ್ಬಂದಿ
ಮೃತಪಟ್ಟಿದ್ದಾರೆ.

ಶಾಂತಿ ಮಾತುಕತೆಯಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ ಎಂದು ತೋರುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವೇ ಇದೆ. ಬಿಜೆಪಿನೇತೃತ್ವದ ಈಶಾನ್ಯ ಭಾರತ ಪ್ರಜಾಸತ್ತಾತ್ಮಕ ಒಕ್ಕೂಟದ ಮಿಜೋ ನ್ಯಾಷನಲ್ಪಾರ್ಟಿ ಮಿಜೋರಾಂನಲ್ಲಿ ಸರ್ಕಾರ ನಡೆಸುತ್ತಿದೆ. ಮಿತ್ರಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಜತೆಗೇ ಬಿಜೆಪಿ ಗಡಿ ಸಂಘರ್ಷಕ್ಕೆ ಮುಂದಾಗಿದೆ ಎಂದು ಇಲ್ಲಿನ ಬಿಜೆಪಿ ನಾಯಕರು ಅಸಮಾಧಾನವ್ಯಕ್ತಪಡಿಸಿದ್ದಾರೆ.

ಮೇಘಾಲಯ ಜತೆಗೂ ಸಂಘರ್ಷ: ಅಸ್ಸಾಂ ಜತೆ ಗಡಿ ಹಂಚಿಕೊಂಡಿರುವ ಮೇಘಾಲಯದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ,ವಿದ್ಯುತ್ ಕಂಬ ಅಳವಡಿಸುತ್ತಿದ್ದ ಮೇಘಾಲಯ ಅಧಿಕಾರಿಗಳನ್ನು ಅಸ್ಸಾಂ ಅಧಿಕಾರಿಗಳು ಸೋಮವಾರ ಸಂಜೆ ತಡೆದಿದ್ದಾರೆ. ಎರಡೂ ಕಡೆಯ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಾಮಗಾರಿಸ್ಥಗಿತಗೊಳಿಸಲಾಗಿದೆ.

ಆರ್ಥಿಕ ದಿಗ್ಬಂಧನದ ಬೆದರಿಕೆ

ಮಿಜೋರಾಂ ಜತೆ ಗಡಿ ಹಂಚಿಕೊಂಡಿರುವ ಅಸ್ಸಾಂನ ಗಡಿ ಜಿಲ್ಲೆಗಳ ಜನರು ಮಿಜೋರಾಂಗೆ ಆರ್ಥಿಕ ದಿಗ್ಬಂಧನದ ಬೆದರಿಕೆ ಒಡ್ಡಿವೆ. ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಈಗಾಗಲೇ ಆರ್ಥಿಕ ದಿಗ್ಬಂಧನ ಘೋಷಿಸಿವೆ.

ಎರಡೂ ರಾಜ್ಯಗಳ ನಡುವೆ ಸಾರ್ವಜನಿಕ ಸಾರಿಗೆ ಬಸ್‌ಗಳು, ಖಾಸಗಿ ವಾಹನಗಳು ಮತ್ತು ಸರಕು ಸಾಗಣೆ ವಾಹನಗಳ ಸಂಚಾರವನ್ನು ಅಸ್ಸಾಂ ಗಡಿ ಜಿಲ್ಲೆಗಳ ಜನರು ತಡೆದು ನಿಲ್ಲಿಸಿದ್ದಾರೆ. ಹೀಗಾಗಿ ಎರಡೂ ರಾಜ್ಯಗಳ ನಡುವೆ ರಸ್ತೆ ಸಂಪರ್ಕ ಸ್ಥಗಿತವಾಗಿದೆ.

ಪೆಟ್ರೋಲ್‌-ಡೀಸೆಲ್, ಅಡುಗೆ ಅನಿಲ, ಆಹಾರ ಸಾಮಗ್ರಿ ಮತ್ತಿತರ ಅತ್ಯವಶ್ಯಕ ವಸ್ತುಗಳಿಗಾಗಿ ಮಿಜೋರಾಂ ಅಸ್ಸಾಂ ರಾಜ್ಯವನ್ನು ಅವಲಂಬಿಸಿದೆ. ಸಂಚಾರ ಸ್ಥಗಿತವಾದರೆ ಮಿಜೋರಾಂನಲ್ಲಿ ಈ ವಸ್ತುಗಳ ಕೊರತೆ ಉಂಟಾಗಲಿದೆ. ಮಿಜೋರಾಂ ಮೇಲೆ ಒತ್ತಡ ಹೇರುವ ತಂತ್ರವಾಗಿ ಅಸ್ಸಾಂ ಪ್ರಾದೇಶಿಕ ಪಕ್ಷಗಳು ಆರ್ಥಿಕ ದಿಗ್ಬಂಧನ ಹೇರಿವೆ. ರಾಜ್ಯ ಸರ್ಕಾರ ಸಹ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲ.

*ಗಡಿ ಜಿಲ್ಲೆಗಳಲ್ಲಿ ರಾಜ್ಯ ಕಮಾಂಡೊ ಪಡೆಯ ತುಕಡಿಗಳನ್ನು ನಿಯೋಜನೆ ಮಾಡಿದ ಅಸ್ಸಾಂ ಸರ್ಕಾರ

*ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿರುವ ಮಿಜೋರಾಂ ಸರ್ಕಾರ

*ಅಸ್ಸಾಂನಲ್ಲಿ ಮೂರು ದಿನ ಶೋಕಾಚರಣೆ, ಗಡಿ ಭಾಗದ ಜನರಲ್ಲಿ ಆಕ್ರೋಶ

*ಗಡಿ ಭಾಗದಲ್ಲಿ ಮಿಜೋರಾಂ ನಮ್ಮ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿದೆ. ಇದನ್ನು ತೆರವು ಮಾಡಿಸಿ ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ಹೇಳಿದೆ

*ಸಂಘರ್ಷ ಕುರಿತು ತನಿಖೆ ನಡೆಸಲು ಮುಂದಾದ ಅಸ್ಸಾಂ ಮತ್ತು ಮಿಜೋರಾಂ ಸರ್ಕಾರ

***

ಎರಡೂ ರಾಜ್ಯಗಳ ಮಧ್ಯೆ ಸಂಘರ್ಷವನ್ನು ಕೊನೆಗಾಣಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಕೇಂದ್ರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು

-ಗೌರವ್ ಗೊಗೊಯಿ, ಕಾಂಗ್ರೆಸ್ ಸಂಸದ

***

ಜನರ ಮಧ್ಯೆ ದ್ವೇಷ ಮತ್ತು ಅಪನಂಬಿಕೆ ಬಿತ್ತಿದ್ದರ ಭೀಕರ ಪರಿಣಾಮವನ್ನು ದೇಶ ಎದುರಿಸುತ್ತಿದೆ. ಶಾಂತಿ ಕಾಪಾಡುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ

- ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

***

ಪರಸ್ಪರ ಮಾತುಕತೆಯಿಂದ ಮಾತ್ರವೇ ಎರಡೂ ರಾಜ್ಯಗಳು ಗಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿದೆ

-ನಿತ್ಯಾನಂದ ರಾಯ್,ಕೇಂದ್ರ ಗೃಹ ಖಾತೆ ರಾಜ್ಯ ಸಚಿವ

***

ನಮ್ಮ ಗಡಿಗಳನ್ನು ಬೇರೆಯವರು ಒತ್ತುವರಿ ಮಾಡಲು ಅವಕಾಶ ನೀಡುವುದಿಲ್ಲ. ಯಾವ ಬೆಲೆ ತೆತ್ತಾದರೂ ನಮ್ಮ ನೆಲವನ್ನು ನಾವು ಉಳಿಸಿಕೊಳ್ಳುತ್ತೇವೆ

-ಹಿಮಂತಾ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

***

ಪೊಲೀಸರ ಹತ್ಯೆಯನ್ನು ಮಿಜೋ ಜನರು ಸಂಭ್ರಮಿಸಿದ್ದಾರೆ. ಅಸ್ಸಾಂ ಪೊಲೀಸರನ್ನು ಕೊಂದಿರುವ ಮಿಜೋರಾಂ ಸರ್ಕಾರವು ಅಸ್ಸಾಂ ಸರ್ಕಾರ ಮತ್ತು ಅಸ್ಸಾಂ ಜನರ ಎದುರು ಕ್ಷಮೆ ಯಾಚಿಸಲೇಬೇಕು

-ದಿಲೀಪ್ ಸೈಕಿಯಾ, ಬಿಜೆಪಿ ಸಂಸದ

***

ಎಂತಹ ಭೀಕರ ಸಂಘರ್ಷ. ಬಿಜೆಪಿ ಮೂಗಿನಡಿಯಲ್ಲಿಯೇ ಇಂತಹ ಅವಿವೇಕದ ದುರ್ಘಟನೆಗಳು ನಡೆದಿವೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ

- ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT