ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ: ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ
Last Updated 1 ಜನವರಿ 2022, 17:46 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಶೋಷಣೆ ಮಾಡದೆ, ಅವರ ಬೇಡಿಕೆ
ಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳ 14,183 ಅತಿಥಿ ಉಪನ್ಯಾಸಕರು ಹಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಉಪನ್ಯಾಸಕರ ಜೊತೆ ಮಾನವೀಯತೆಯಿಂದ ವರ್ತಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸೇವೆಗೆ ಕನಿಷ್ಠ ಭದ್ರತೆ ಮತ್ತು ವರ್ಷದ ಎಲ್ಲ ತಿಂಗಳು ಸಂಬಳ ನೀಡಬೇಕು. ಜೊತೆಗೆ, ಘನತೆಯಿಂದ ಬದುಕುವುದಕ್ಕೆ ಬೇಕಾಗುವಷ್ಟು ಸಂಬಳ ನೀಡ
ಬೇಕು ಎಂದು ಅತಿಥಿ ಉಪನ್ಯಾಸಕರು ಬೇಡಿಕೆ ಇಟ್ಟಿದ್ದಾರೆ. ಈಗ ನೀಡುತ್ತಿರುವುದಕ್ಕೆ ₹ 200 ಕೋಟಿ ಹೆಚ್ಚು ಹಣ ನೀಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಸರ್ಕಾರದ ನಿರ್ಲಕ್ಷ್ಯ ಅಮಾನವೀಯವಾದುದು’ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹ 11 ಸಾವಿರದಿಂದ ₹ 13 ಸಾವಿರ ಗೌರವಧನ ನೀಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಪ್ರತಿ ವಸ್ತುಗಳ ಬೆಲೆ‌ ದುಪ್ಪಟ್ಟಾಗಿದೆ. ಸರ್ಕಾರ ನೀಡುತ್ತಿರುವ ಪುಡಿಗಾಸಿನಲ್ಲಿ ಅವರು ಬದುಕುವುದು ಹೇಗೆ? ಅದೂ ವರ್ಷದಲ್ಲಿ ಎಂಟು ತಿಂಗಳು ಮಾತ್ರ. ಯುಜಿಸಿ ಸಂಬಳ ಪಡೆಯುವ ಉಪನ್ಯಾಸಕರಷ್ಟೆ ಪರಿಣಾಮಕಾರಿಯಾಗಿ ಅತಿಥಿ ಉಪನ್ಯಾಸಕರೂ ಪಾಠ- ಪ್ರವಚನಗಳನ್ನು ಮಾಡುತ್ತಾರೆ. ಅತಿ ಕಡಿಮೆ ಗೌರವಧನ ನೀಡುವುದನ್ನು ಕೆಲವರು ಶೋಷಣೆ ಎಂದಿದ್ದಾರೆ. ಅತಿಥಿ ಉಪನ್ಯಾಸಕರ ಈ ಮಾತಿಗೆ ಕೆರಳಿದ ಶಿಕ್ಷಣ ಸಚಿವರು, ಪ್ರತಿಭಟನಾಕಾರರನ್ನು ನಿಂದಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಸರ್ಕಾರದ ಈ ನಿಲುವು ಖಂಡನೀಯ’ ಎಂದಿದ್ದಾರೆ.

‘ಸರಿಯಾಗಿ ಸಂಬಳವಿಲ್ಲದೆ ಕೋವಿಡ್ ಸಂದರ್ಭದಲ್ಲಿ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ಅಸುನೀಗಿದ್ದಾರೆ. ಹೀಗಾಗಿ, ಬೇಡಿಕೆಗಳನ್ನು ಈಡೇರಿಸಿ, ಅವರು ಬೋಧನೆಯಲ್ಲಿ ತೊಡಗಿಕೊಳ್ಳುವಂತೆ ಕ್ರಮವಹಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ತಮ್ಮದು. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಯನ್ನು ಹೆಚ್ಚಿಸುವುದಕ್ಕಾಗಿ ಸುಸ್ಥಿರ ಅಭಿ
ವೃದ್ಧಿ ಗುರಿ ಹಾಕಿಕೊಂಡಿದ್ದೇವೆ’ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ, ಕಳಪೆ ಯಂತ್ರೋಪಕರಣಗಳನ್ನು ಅಳವಡಿಸಲು ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಆದರೆ, ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಕೇಳುವ ಅತಿಥಿ ಉಪನ್ಯಾಸಕರನ್ನು ನಿಂದಿಸುವುದು, ಹಂಗಿಸುವುದು ಅಮಾನವೀಯ ನಡವಳಿಕೆ’ ಎಂದೂ ಟೀಕಿಸಿದ್ದಾರೆ.

‘ಹಲ್ಲೆಗೆ ಒಳಗಾದ ವಿದ್ಯಾರ್ಥಿ ಜೀವ ಉಳಿಸಿ’

‘ಅತಿಥಿ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳದ ಕಾರಣದಿಂದಾಗಿ, ಕಾರಿಡಾರ್‌ಗಳಲ್ಲಿ ಓಡಾಡುತ್ತಿರುವ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಯೊಂದರಲ್ಲಿ ಗಾರೆ ಕೆಲಸಗಾರರೊಬ್ಬರ ಮಗ ತೀವ್ರ ಗಾಯಗೊಂಡಿದ್ದು, ಆತನ ಜೀವ ಉಳಿಸಲು ಸರ್ಕಾರ ಮುಂದಾಗಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಬೆಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದರಿಂದ ಗಾಯಗೊಂಡ ವಿದ್ಯಾರ್ಥಿಯೊಬ್ಬ ಜೀವನ್ಮರಣದ ಸ್ಥಿತಿಯಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿದ್ದಾನೆ. ತೀವ್ರ ಬಡತನದಲ್ಲಿರುವ ಈತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಬಡ ಕೂಲಿಕಾರನ ಮಗನನ್ನು ಉಳಿಸಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

***

ಅತಿಥಿ ಉಪನ್ಯಾಸಕರ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ ಖಂಡನೀಯ. ಸಾಂತ್ವನ ಹೇಳುವ ಔದಾರ್ಯ ಇಲ್ಲದ ಅವರು, ಸಚಿವರಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ
-ಎಚ್. ವಿಶ್ವನಾಥ್, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT