ಭಾನುವಾರ, ನವೆಂಬರ್ 1, 2020
19 °C

ದೇಸಿ ಆಟಿಕೆ ಅಭಿವೃದ್ಧಿಗೆ 'ಫನ್‌ಸ್ಕೂಲ್‌' ಗಂಭೀರ ಚಿಂತನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು 'ಮನ್‌ ಕಿ ಬಾತ್’‌ನಲ್ಲಿ ಪ್ರಸ್ತಾಪಿಸಿದಂತೆ, ಆಟಿಕೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫನ್‌ಸ್ಕೂಲ್‌ ಇಂಡಿಯಾ ಕಂಪನಿ ದೇಶೀಯ ಆಟಿಕೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶೀಯ ಆಟಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಭಾರತದಲ್ಲಿ ತನ್ನ ಕಂಪನಿಯ ಚಟುವಟಿಕೆಗಳನ್ನು ಬಲಪಡಿಸಿಕೊಳ್ಳಲು ಮುಂದಾಗಿದೆ. ಜತೆಗೆ, ಕಂಪನಿಯು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ವಿತರಣಾ ಜಾಲವನ್ನು ಗಣನೀಯವಾಗಿ ವಿಸ್ತರಿಸುವತ್ತ ಗಮನಹರಿಸಿದೆ ಎಂದು ಫನ್‌ಸ್ಕೂಲ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ಜೆಸ್ವಂತ್ ಹೇಳಿದ್ದಾರೆ.

'ಮುಂದಿನ ವರ್ಷದೊಳಗೆ ನೂರು ಆಟಿಕೆಗಳನ್ನು ತಯಾರಿಸುವ ಗುರಿ ಇದೆ. ಸ್ಥಳೀಯ ಉತ್ಪಾದನೆ ಉತ್ತೇಜಿಸುವ ಕುರಿತು ಸರ್ಕಾರ ಬಿಡುಗಡೆ ಮಾಡಲಿರುವ  ನೀತಿ ಉಪಕ್ರಮಗಳನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಜಸ್ವಂತ್‌, 'ಭಾರತದ ಕೆಲವು ಸಾಂಪ್ರದಾಯಿಕ ಆಟಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಇದಕ್ಕಾಗಿ ಸ್ಥಳೀಯ ಉತ್ಪಾದಕರೊಂದಿಗೆ ಸೇರಿ ಕೆಲಸ ಮಾಡಲಿದ್ದೇವೆ. ಇದರಿಂದ ಸ್ಥಳೀಯ ಕರಕುಶಲ ವಸ್ತು ತಯಾರಿಕರಿಗೆ ಸಹಾಯವಾಗುವುದರ ಜತೆಗೆ, ಗುಣಮಟ್ಟದ ಉತ್ಪನ್ನಗಳೂ ತಯಾರಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಮ್ಮ ಮೂರು ಘಟಕಗಳು ಏಪ್ರಿಲ್‌ನಿಂದ ಕಾರ್ಯ ಸ್ಥಗಿತಗೊಳಿಸಿವೆ. ಆದರೆ, ನಾವು ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ಮೂಲಕ ಮತ್ತೆ ಘಟಕಗಳನ್ನು ಪುನರಾರಂಭಿಸುತ್ತೇವೆ’ ಎಂದು ಜಸ್ವಂತ್ ಹೇಳಿದ್ದಾರೆ.

ಆಟಿಕೆ ಉದ್ಯಮದ ಬಗ್ಗೆ ಪ್ರಧಾನ ಮಂತ್ರಿ ತಮ್ಮ 'ಮನ್ ಕಿ ಬಾತ್'ನಲ್ಲಿ 'ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕಡಿಮೆ ಇದೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 'ಈಗ ಆಟಿಕೆ ಮಾರುಕಟ್ಟೆ ವಿಕಸನಗೊಳ್ಳುತ್ತಿದೆ. ಜತೆಗೆ ನಮ್ಮ ಪ್ರಧಾನಿಯವರಂತೆ ಉದ್ಯಮದತ್ತ ಗಮನ ಹರಿಸುವವರು ಅಗತ್ಯವಾಗಿ ಬೇಕಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು