ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗೆ ತೆರಳಲು ಅವಕಾಶ ಕೋರಿದ ಜನಾರ್ದನ ರೆಡ್ಡಿ: ಆದೇಶ ಕಾಯ್ದಿರಿಸಿದ ಸುಪ್ರೀಂ

ಜಾಮೀನು ಷರತ್ತು ಸಡಿಲಿಕೆ
Last Updated 5 ಏಪ್ರಿಲ್ 2021, 19:11 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ, ಅನಂತಪುರ ಮತ್ತು ಕಡಪ ನಗರಗಳಿಗೆ ತೆರಳದಂತೆ ವಿಧಿಸಲಾದ ಜಾಮೀನು ಷರತ್ತನ್ನು ಸಡಿಲಗೊಳಿಸುವಂತೆ ಕೋರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧದ ಆದೇಶವನ್ನು ಕಾಯ್ದಿರಿಸಿದೆ.

ಆರೋಪಿ ಅತ್ಯಂತ ಪ್ರಭಾವೀ ವ್ಯಕ್ತಿ. ಸಾಕ್ಷಾಧಾರಗಳನ್ನು ಬೆದರಿಸುವಂಥವರು. ಪ್ರಕರಣದ ಅನೇಕ ಸಾಕ್ಷಿಗಳು ಪೊಲೀಸ್‌ ಭದ್ರತೆಯಲ್ಲಿ ಇದ್ದು, ಜಾಮೀನು ಷರತ್ತನ್ನು ಸಡಿಲಿಸಕೂಡದು ಎಂದು ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವನ್ನು ಕೋರಿದರು.

‘ಕೌಟುಂಬಿಕ ಕಾರಣಗಳಿಗಾಗಿ ಎರಡು ಅಥವಾ ಮೂರು ದಿನಗಳ ಅವಧಿಗೆ ಆರೋಪಿಯು ಬಳ್ಳಾರಿಗೆ ತೆರಳಲು ಅವಕಾಶ ಕೋರಿದಾಗ ನಾವು ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಶಾಶ್ವತವಾಗಿ ಬಳ್ಳಾರಿಯಲ್ಲಿ ತಂಗಲು ಅವರಿಗೆ ಅವಕಾಶ ನೀಡಬಾರದು’ ಎಂದೂ ಅವರು ಹೇಳಿದರು.

ರೆಡ್ಡಿ ಬಂಧನದ ಅನೇಕ ದಿನಗಳ ನಂತರ ನಾವು ಸಾಕ್ಷ್ಯಗಳಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ಅವರು ಮನವಿ ಮಾಡಿದರು.

ಸಾಕ್ಷಾಧಾರಗಳ ವಿಚಾರಣೆಯನ್ನೇ ಪೂರ್ಣಗೊಳಿಸದ ಸಿಬಿಐ ಈಗಾಗಲೇ 20ಕ್ಕೂ ಅಧಿಕ ಬಾರಿ ಹೆಚ್ಚುವರಿ ಕಾಲಾವಕಾಶವನ್ನು ಪಡೆದಿದೆ. ತನಿಖಾ ಸಂಸ್ಥೆಗೆ ಒಂದೊಮ್ಮೆ ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ತನಿಖೆಯನ್ನೇ ಕೈಬಿಡುವುದು ಲೇಸು ಎಂದು ರೆಡ್ಡಿ ಪರ ವಕೀಲ ಮುಕುಲ್‌ ರೋಹಟ್ಗಿ ಹೇಳಿದರು.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011ರ ಸೆಪ್ಟೆಂಬರ್‌ 5ರಂದು ಬಳ್ಳಾರಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಅವರಿಗೆ, ಸುಪ್ರೀಂ ಕೋರ್ಟ್‌ 2015ರ ಜನವರಿ 21ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT