ಭಾನುವಾರ, ನವೆಂಬರ್ 27, 2022
20 °C

ಪೈಲಟ್ ‘ನಂಬಿಕೆ ದ್ರೋಹಿ’ ಅಂದಿದ್ದು ಆಕಸ್ಮಿಕ: ಗೆಹಲೋತ್ ಪರ ಜೈರಾಂ ರಮೇಶ್ ಸಮರ್ಥನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸನಾವದ್‌ (ಮಧ್ಯಪ್ರದೇಶ): ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ತಮ್ಮ ಪಕ್ಷದ ಸಹೋದ್ಯೋಗಿ ಸಚಿನ್ ಪೈಲಟ್ ಅವರನ್ನು ‘ನಂಬಿಕೆ ದ್ರೋಹಿ’ ಎಂದು ಕರೆದಿರುವುದು ‘ಅನಿರೀಕ್ಷಿತ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಶುಕ್ರವಾರ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಗೆಹಲೋತ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಅನುಭವಿಗಳು. ಟಿ.ವಿ ಸಂದರ್ಶನದಲ್ಲಿ ಅವರು ಸಚಿನ್ ವಿರುದ್ಧ ಈ ರೀತಿ ಪದ ಬಳಸಿರುವುದು ನನಗೂ ಅನಿರೀಕ್ಷಿತವಾಗಿದ್ದು, ಅಶ್ಚರ್ಯ ತಂದಿದೆ’ ಎಂದಿದ್ದಾರೆ. 

‘ಪಕ್ಷಕ್ಕೆ ಈ ಇಬ್ಬರು ನಾಯಕರ ಅಗತ್ಯವಿದೆ. ಕೆಲವು ಭಿನ್ನಾಭಿಪ್ರಾಯಗಳಿವೆ ನಿಜ. ಆದರೆ, ನಾವು ಅದರಿಂದ ಪಲಾಯನ ಮಾಡುತ್ತಿಲ್ಲ. ರಾಜಸ್ಥಾನದ ಸಮಸ್ಯೆಗೆ ಸೂಕ್ತ ನಾಯಕತ್ವದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಸಂಘಟನೆ ಮುಖ್ಯವೇ ಹೊರತು ವ್ಯಕ್ತಿಗಳಲ್ಲ’ ಎಂದೂ ತಿಳಿಸಿದ್ದಾರೆ. 

‘ಸಚಿನ್ ಪೈಲಟ್ ಅವರು ಯುವ, ಶಕ್ತಿಯುತ, ಜನಪ್ರಿಯ ಮತ್ತು ವರ್ಚಸ್ವಿ ನಾಯಕ’ ಎಂದು ರಮೇಶ್ ಬಣ್ಣಿಸಿದ್ದಾರೆ. 

ಇದೇ ವೇಳೆ ಬಿಜೆಪಿಯನ್ನು ಟೀಕಿಸಿದ ಅವರು, ‘ಕಾಂಗ್ರೆಸ್ ನಾಯಕರು ಯಾವುದೇ ಭಯವಿಲ್ಲದೆ ತಮ್ಮ ಹೃದಯದಿಂದ ಮಾತನಾಡಬಹುದು. ಏಕೆಂದರೆ ಪಕ್ಷದ ನಾಯಕತ್ವವು ಸರ್ವಾಧಿಕಾರಿಯಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಇದುವೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವಾಗಿದೆ’ ಎಂದೂ ಹೇಳಿದ್ದಾರೆ.  

‘ಸಚಿನ್ ಪೈಲಟ್ ನಂಬಿಕೆ ದ್ರೋಹಿ. ಅವರು ನನ್ನ ಸ್ಥಾನ ತುಂಬಲಾರರು. 2020ರಲ್ಲಿ ಪಕ್ಷದಲ್ಲಿ ನನ್ನದೇ ವಿರುದ್ಧ ಅವರು ಬಂಡಾಯವೆದ್ದಿದ್ದರು. ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಅಶೋಕ್ ಗೆಹಲೋತ್ ಅವರು ಗುರುವಾರ ಟಿ.ವಿ ಸಂದರ್ಶನವೊಂದರಲ್ಲಿ ಹೇಳಿದ್ದರು. 

ಕಾಂಗ್ರೆಸ್ ಆರೋಪ ಅಲ್ಲಗಳೆದ ಬಿಜೆಪಿ

 ‘2020ರಲ್ಲಿ ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಶಾಸಕರ ಗುಂಪಿನ ಬಂಡಾಯದಲ್ಲಿ ಬಿಜೆಪಿಯ ಪಾತ್ರವಿದೆ’ ಎಂಬ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಆರೋಪವು ಆಧಾರರಹಿತ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಪೂನಿಯಾ, ‘ರಾಜಸ್ಥಾನ ಕಾಂಗ್ರೆಸ್‌ನೊಳಗಿರುವ ಬಿಕ್ಕಟ್ಟಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾಲ್ಕು ವರ್ಷಗಳಿಂದ ಗೆಹಲೋತ್ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಅವುಗಳಿಗೆ ಯಾವುದೇ ಆಧಾರವಿಲ್ಲ’ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು