ವಿಶೇಷ ಗುರುತಿನ ಮತಪತ್ರ: ಆಯೋಗದ ಸುತ್ತೋಲೆ ಅಮಾನತುಗೊಳಿಸಿದ ಹೈಕೋರ್ಟ್

ಹೈದರಾಬಾದ್: 'ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಚುನಾವಣೆಯಲ್ಲಿ ಚಲಾವಣೆಯಾಗಿರುವ ಮತಗಳಲ್ಲಿ ‘ಸ್ವಸ್ತಿಕ್ ಗುರುತು‘ ಹೊರತುಪಡಿಸಿ ವಿಶಿಷ್ಟ ಚಿಹ್ನೆಗಳಿರುವ ಮತ ಪತ್ರಗಳನ್ನು ಎಣಿಸುವಂತೆ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಸುತ್ತೋಲೆಯನ್ನು ತೆಲಂಗಾಣ ಹೈ ಕೋರ್ಟ್ ಅಮಾನತುಗೊಳಿಸಿದೆ.
ಚುನಾವಣಾ ಆಯೋಗದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಿಷೇಕ್ ರೆಡ್ಡಿ ಅವರು, ‘ಸ್ವಸ್ತಿಕ್ ಗುರುತು‘ ಅಲ್ಲದೇ ಬೇರೆ ವಿಶೇಷ ಚಿಹ್ನೆಗಳ ಗುರುತಿರುವ ಮತಪತ್ರಗಳನ್ನು ಪ್ರತ್ಯೇಕವಾಗಿ ತೆಗೆದಿಡುವಂತೆ ಆಯೋಗಕ್ಕೆ ಸೂಚಿಸಿದ್ದಾರೆ. ಇಂಥ ಮತಪತ್ರಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಹಾಗೆ, ಇಂಥ ವಿಶೇಷ ಗುರುತಿನ ಮತಪತ್ರಗಳನ್ನು ಸೇರಿಸಿ ಎಣಿಕೆ ಮಾಡಿರುವ ಫಲಿತಾಂಶಗಳನ್ನು ಪ್ರಕಟಿಸದಂತೆಯೂ ತಿಳಿಸಿದ್ದಾರೆ.
‘ಒಂದು ಪಕ್ಷದ ಅಭ್ಯರ್ಥಿಗಳ ಗೆಲುವಿನ ಅಂತರ ವಿವಾದಿತ ಮತಪತ್ರಗಳ ಸಂಖ್ಯೆಗಿಂತ ಕಡಿಮೆ ಇದ್ದರೆ, ಅಂಥ ಪತ್ರಗಳನ್ನು ಎಣಿಕೆಗೆ ತೆಗೆದುಕೊಳ್ಳಬಾರದು ಮತ್ತು ಅಂಥ ವಾರ್ಡ್ ಫಲಿತಾಂಶವನ್ನು ಘೋಷಿಸಬಾರದು‘ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕೆಲವು ಮತಗಟ್ಟೆ ಅಧಿಕಾರಿಗಳು ‘ಮತದಾನದ ದಿನದಂದು ಮತದಾರರಿಗೆ ಸ್ವಸ್ತಿಕ್ ಚಿಹ್ನೆಯ ಬದಲು ತಪ್ಪಾಗಿ ‘ವಿಶಿಷ್ಟ ಗುರುತು‘ ನೀಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಎಸ್ಇಸಿ ಗುರುವಾರ ರಾತ್ರಿ ಸುತ್ತೋಲೆ ಹೊರಡಿಸಿ ‘ನಿರ್ದಿಷ್ಟ ಅಭ್ಯರ್ಥಿಗೆ ಗುರುತು ಹಾಕುವಲ್ಲಿ ಮತದಾರರ ಉದ್ದೇಶ ಸ್ಪಷ್ಟವಾಗಿದ್ದರೆ, ಆ ಮತವನ್ನು ಮಾನ್ಯ ಮಾಡಬೇಕು. ಏಕೆಂದರೆ ಇದು ಮತಗಟ್ಟೆ ಅಧಿಕಾರಿಯಿಂದ ಆದ ತಪ್ಪಾಗಿದೆ ‘ ಎಂದು ಉಲ್ಲೇಖಿಸಿತ್ತು.
ಆಯೋಗ ಹೊರಡಿಸಿದ ಈ ಸುತ್ತೋಲೆ ಕಾನೂನು ಬಾಹಿರ ಹಾಗೂ ಚುನಾವಣಾ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಅರ್ಜಿದಾರರಾದ ಆಂಟನಿ ರೆಡ್ಡಿ ಮತ್ತು ಕೆ.ಸುರೇಂದರ್ (ಜೆಎಚ್ಎಂಸಿ ಅಭ್ಯರ್ಥಿ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಎಸ್ಇಸಿ ಹೊರಡಿಸಿದ ಸುತ್ತೋಲೆಯನ್ನು ಕಾನೂನುಬಾಹಿರ, ಅನಿಯಂತ್ರಿತ ಮತ್ತು ಚುನಾವಣಾ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಘೋಷಿಸಲು ಅರ್ಜಿದಾರರಾದ ಆಂಟನಿ ರೆಡ್ಡಿ ಮತ್ತು ಕೆ ಸುರೇಂದರ್ (ಜಿಎಚ್ಎಂಸಿ ಚುನಾವಣೆಯ ಅಭ್ಯರ್ಥಿ) ನ್ಯಾಯಾಲಯವನ್ನು ಕೋರಿದರು.
ನ್ಯಾಯಾಲಯ ನೀಡಿರುವ ನಿರ್ದೇಶನದ ಮಾಹಿತಿಯನ್ನು ಎಲ್ಲ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.