ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದೂರವಾಣಿ ಕದ್ದಾಲಿಕೆ: ಕಾಂಗ್ರೆಸ್‌ ಆರೋ‌ಪ

ಗೋವಾದಲ್ಲಿ ಪಕ್ಷೇತರ, ಕಾಂಗ್ರೆಸ್ ಆಭ್ಯರ್ಥಿಗಳ ಮೇಲೆ ಅಕ್ರಮವಾಗಿ ಒತ್ತಡ ಹೇರಿಕೆ: ಚೋಡಣ್‌ಕರ್‌
Last Updated 3 ಮಾರ್ಚ್ 2022, 23:00 IST
ಅಕ್ಷರ ಗಾತ್ರ

ಪಣಜಿ: ಗೋವಾ ಕಾಂಗ್ರೆಸ್‌ನ ಮುಖಂಡರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ಬಿಜೆಪಿ ನಿಯೋಜಿಸಿರುವ ಖಾಸಗಿ ಸಂಸ್ಥೆಯೊಂದು ಈ ಕೆಲಸ ಮಾಡುತ್ತಿದೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಗಿರೀಶ್‌ ಚೋಡಣ್‌ಕರ್‌ ಆರೋಪಿಸಿದ್ದಾರೆ.

2019ರಲ್ಲಿ ಕರ್ನಾಟಕದಲ್ಲಿ ‘ಆಪರೇಷನ್‌ ಕಮಲ’ ಮೂಲಕ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದನ್ನು ಗೋವಾದಲ್ಲಿ ಪುನರಾವರ್ತಿಸಲು ಸಿದ್ಧತೆ ನಡೆಸಲಾಗಿದೆ ಎಂದೂ ಅವರು ಆಪಾದಿಸಿದ್ದಾರೆ.

‘ಪಕ್ಷದ ನಾಯಕರ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇದೆ. ನಾವು ಏನು ಮಾತಾಡುತ್ತಿದ್ದೇವೆ ಮತ್ತು ಯಾರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ ಎಂಬುದೆಲ್ಲ ಬಿಜೆಪಿ ನಾಯಕರಿಗೆ ಗೊತ್ತಾಗುತ್ತಿದೆ’ ಎಂಧು ಚೋಡಣ್‌ಕರ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ದೂರಸಂಪರ್ಕ ಪರಿಣತರೊಬ್ಬರು ಬಳಿ ಬಂದು ನನ್ನ ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂದರು. ವಿರೋಧ ಪಕ್ಷದ ನಾಯಕ ದಿಗಂಬರ ಕಾಮತ್‌, ಮಾಜಿ ಸಚಿವ ಮೈಕಲ್‌ ಲೋಬೊ ಅವರ ದೂರವಾಣಿ ಕೂಡ ಕದ್ದಾಲಿಕೆ ಅಗುತ್ತಿದೆ ಎಂದರು. ದೂರವಾಣಿ ಕದ್ದಾಲಿಕೆ ಕಾನೂನುಬಾಹಿರ. ಯಾರ ಅನುಮತಿ ಪಡೆದು ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದನ್ನು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಹೇಳಬೇಕು’ ಎಂದು ಚೋಡಣ್‌ಕರ್‌ ಆಗ್ರಹಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೈಕಲ್‌ ಲೋಬೊ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಗೆ ಬೆಂಬಲ ಕೊಟ್ಟರೆ ಲಾಭದಾಯಕ ಹುದ್ದೆ ಕೊಡಲಾಗುವುದು ಎಂಬ ಭರವಸೆ ಕೊಟ್ಟಿದ್ದಾರೆ ಎಂಬ ವರದಿಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಅದಾದ ಬಳಿಕ ಚೋಡಣ್‌ಕರ್‌ ಅವರು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಲೋಬೊ ಅವರು ಬಂದರು ಸಚಿವರಾಗಿದ್ದರು. ಬಳಿಕ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಗೆಲ್ಲಬಹುದಾದ ಪಕ್ಷೇತರರು ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲುವ ಕ್ಷೇತ್ರಗಳ ಸಂಖ್ಯೆ ಈ ಬಾರಿ ಎರಡಂಕಿ ತಲುಪುವುದಿಲ್ಲ. ಹಾಗಾಗಿ, ಅಕ್ರಮ ದಾರಿಯ ಮೂಲಕ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದೂ ಚೋಡಣ್‌ಕರ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT