ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಫಲಿತಾಂಶಕ್ಕೆ ಮುನ್ನವೇ ಪಕ್ಷಾಂತರದ ಮಾತುಕತೆ

ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಆಮಿಷ: ಕಾಂಗ್ರೆಸ್‌ ಆರೋಪ
Last Updated 19 ಫೆಬ್ರುವರಿ 2022, 21:14 IST
ಅಕ್ಷರ ಗಾತ್ರ

ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಪಕ್ಷಾಂತರದ ಮಾತುಗಳು ಅಲ್ಲಿನ ರಾಜಕೀಯ ವಲಯದಲ್ಲಿ ಕೇಳಿ ಬರತೊಡಗಿವೆ. ಫಲಿತಾಂಶದ ಬಳಿಕ ಪಕ್ಷ ಬದಲಿಸಿದರೆ ಲಾಭದಾಯಕ ಹುದ್ದೆಗಳನ್ನು ಒದಗಿಸಲಾಗುವುದು ಎಂಬ ಆಮಿಷವನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿಯ ಹಿರಿಯ ಮುಖಂಡರು ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಗೋವಾ ಘಟಕದ ಅಧ್ಯಕ್ಷ ಗಿರೀಶ್‌ ಚೋಡಣ್‌ಕರ್‌ ಶನಿವಾರ ಆರೋಪಿಸಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಾರ್ಚ್‌ 10ರಂದು ನಡೆಯಲಿದೆ.

‘ವಿಶ್ವಜಿತ್‌ ರಾಣೆ (ಆರೋಗ್ಯ ಸಚಿವ), ಮೌವಿನ್‌ ಗೊಡೊನ್ಹೊ (ಸಾರಿಗೆ ಸಚಿವ), ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತು ಅವರ ದಲ್ಲಾಳಿಗಳು ನಮ್ಮ ಅಭ್ಯರ್ಥಿಗಳನ್ನು ಖರೀದಿಸಲು ಈಗಲೇ ಪ್ರಯತ್ನಿಸುತ್ತಿದ್ದಾರೆ. ಉತ್ತಮ ಕೊಡುಗೆಗಳ ಭರವಸೆ ಕೊಡುತ್ತಿದ್ದಾರೆ. ನಾವು ಬಹಿರಂಗವಾಗಿಯೇ ಎಚ್ಚರಿಕೆ ನೀಡುತ್ತಿದ್ದೇವೆ. ಈಗಿನದ್ದು ಹೊಸ ಕಾಂಗ್ರೆಸ್‌. ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದರೆ ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತನೂ ಸುಮ್ಮನೆ ಇರುವುದಿಲ್ಲ’ ಎಂದು ಗಿರೀಶ್‌ ಎಚ್ಚರಿಕೆ ಕೊಟ್ಟಿದ್ದಾರೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್‌ನ 17 ಶಾಸಕರು ಗೆದ್ದಿದ್ದರು. ಆದರೆ, ಅವರಲ್ಲಿ 15 ಮಂದಿ ಬಳಿಕ ಪಕ್ಷಾಂತರ ಮಾಡಿದ್ದರು. ಇದುವೇ ಕಾಂಗ್ರೆಸ್‌ ಪಕ್ಷದ ಈಗಿನ ಆತಂಕಕ್ಕೆ ಕಾರಣ.

ವ್ಯಾಪಕವಾಗಿ ನಡೆದ ಪಕ್ಷಾಂತರವು ಕೂಡ ಈ ಬಾರಿಯ ಚುನಾವಣೆಯ ವಿಷಯವಾಗಿತ್ತು. ಪಕ್ಷಾಂತರಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದರು ಎಂದು ಗಿರೀಶ್‌ ಹೇಳಿದ್ದಾರೆ. ಪಕ್ಷದ ಅಭ್ಯರ್ಥಿಗಳು ಗೆಲುವಿನ ಬಳಿಕ ಪಕ್ಷಾಂತರಕ್ಕೆ ಯತ್ನಿಸಬಾರದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಹಲವು ಅಭ್ಯರ್ಥಿಗಳ ಜತೆಗೆ ಸಂಪರ್ಕದಲ್ಲಿರುವುದು ನಿಜ ಎಂಬುದನ್ನು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಒಪ್ಪಿಕೊಂಡಿದ್ದಾರೆ. ಫಲಿತಾಂಶದ ಬಳಿಕ ಸರ್ಕಾರ ರಚನೆಗೆ ಶಾಸಕರ ಕೊರತೆಯಾದರೆ, ಪಕ್ಷೇತರ ಶಾಸಕರ ಮೂಲಕ ಅದನ್ನು ತುಂಬಲು ಯತ್ನಿಸಲಾಗುವುದು ಎಂದಿದ್ದಾರೆ.

ಅಭ್ಯರ್ಥಿಗಳನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಕೇಂದ್ರಗಳಿಗೆ ಕರೆದೊಯ್ದು ಪಕ್ಷ ಬಿಡುವುದಿಲ್ಲ ಎಂದು ಮತದಾನಕ್ಕೆ ಮೊದಲೇ ಕಾಂಗ್ರೆಸ್‌ ಪಕ್ಷವು ಪ್ರಮಾಣ ಮಾಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT