ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಬಿಜೆಪಿ ತೊರೆದ ಸಚಿವ ಲೋಬೊ, ಶಾಸಕ ಪ್ರವೀಣ್‌

Last Updated 11 ಜನವರಿ 2022, 3:04 IST
ಅಕ್ಷರ ಗಾತ್ರ

ಪಣಜಿ: ಗೋವಾ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಂತೆ, ಸಚಿವ ಮೈಕೆಲ್‌ ಲೋಬೊ ಮತ್ತು ಶಾಸಕ ಪ್ರವೀಣ್‌ ಝಂತ್ಯೆ ಬಿಜೆಪಿ ಸದಸ್ಯತ್ವಕ್ಕೆ ಮತ್ತು ಗೋವಾ ವಿಧಾನಸಭೆಗೆ ಸೋಮವಾರ ರಾಜೀನಾಮೆ ನೀಡಿದರು.

ಕಲಂಗುಟ್‌ ವಿಧಾನಸಭೆ ಕ್ಷೇತ್ರದ ಶಾಸಕರಾದ ಲೋಬೊ ಅವರು ಬಂದರು ಮತ್ತು ತ್ಯಾಜ್ಯ ನಿರ್ವಹಣಾ ಸಚಿವರಾಗಿದ್ದರು. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತು ಗೋವಾ ವಿಧಾನಸಭೆ ಸ್ಪೀಕರ್‌ಗೆ ಅವರು ರಾಜೀನಾಮೆ ಪತ್ರ ನೀಡಿದ್ದಾರೆ. ಈ ಕುರಿತು ಸುದ್ದಿಗಾರರ ಎದುರು ಮಾತನಾಡಿದ ಲೋಬೊ, ‘ಪಕ್ಷದ ಸದಸ್ಯತ್ವ ಮತ್ತು ಸಚಿವ ಸ್ಥಾನಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ಹೆಜ್ಜೆ ಇಡಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಬಿಜೆಪಿ ಆಡಳಿತದ ಕುರಿತು ಗೋವಾ ಜನರು ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ಸಾಮಾನ್ಯರ ಪಕ್ಷವಾಗಿ ಉಳಿದಿಲ್ಲ ಎಂದು ಮತದಾರರು ನನಗೆ ಹೇಳಿದ್ದಾರೆ. ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಬುಡಮಟ್ಟದ ಕಾರ್ಯಕರ್ತರು ಭಾವಿಸಿದ್ದಾರೆ’ ಎಂದರು.

ಕಾಂಗ್ರೆಸ್‌ ಸೇರುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆಬೇರೆ ಪಕ್ಷಗಳ ಜೊತೆ ಮತುಕತೆ ನಡೆಯುತ್ತಿದೆ ಎಂದರು. ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಲೋಬೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮಾಯೆಮ್‌ ವಿಧಾನಸಭೆ ಕ್ಷೇತ್ರದ ಶಾಸಕ ಪ್ರವೀಣ್‌ ಝಂತ್ಯೆ ಕೂಡಾ ರಾಜೀನಾಮೆ ನೀಡಿದ್ದಾರೆ. ‘ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ಕಾರಣಕ್ಕಾಗಿ ನಾನು ಬಿಜೆಪಿ ಸೇರಿದೆ. ಅವರ ನಿಧನದ ನಂತರ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಯಿತು’ ಎಂದುಝಂತ್ಯೆ ಹೇಳಿದ್ದಾರೆ. ಅದಲ್ಲದೇ ತಮ್ಮ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಬಾಧಿಸುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು ಎಂದು ಹೇಳಿದ್ದಾರೆ.

ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ ಎಂದು ಪ್ರಮೋದ್‌ ಸಾವಂತ್ ಅವರು ಸರಣಿ ಟ್ವೀಟ್‌ಗಳ ಮೂಲಕ ಹೇಳಿದ್ದಾರೆ. ‘ಬಿಜೆಪಿ ಒಂದು ದೊಡ್ಡ ಕುಟುಂಬ. ಅದು ಸಂಪೂರ್ಣ ಸಮರ್ಪಣಾ ಭಾವದಿಂದ ಮಾತೃಭೂಮಿಯ ಸೇವೆಯನ್ನು ಸದಾ ಮಾಡುತ್ತದೆ. ದುರಾಸೆ ಮತ್ತು ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಕೆಲವರು ಪಕ್ಷಾಂತರ ಮಾಡುತ್ತಾರೆ. ಇದರಿಂದ ಉತ್ತಮ ಆಡಳಿತ ನೀಡಬೇಕುಎಂಬ ನಮ್ಮ ಉದ್ದೇಶಕ್ಕೆ ಅಡ್ಡಿ ಆಗುವುದಿಲ್ಲ. ಬಿಜೆಪಿಯ ಆಡಳಿತ ಮತ್ತು ಅಭಿವೃದ್ಧಿ ಮಾದರಿಯನ್ನು ಗೋವಾ ಜನರು ಒಂದು ದಶಕದಿಂದ ನೋಡುತ್ತಿದ್ದಾರೆ. ಅವರು ನಮಗೆ ಮತ್ತೊಂದು ಅವಧಿಯನ್ನು ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಹೇಳಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಗೋವಾ ಅಧ್ಯಕ್ಷ ಸದಾನಂದ್‌ ಶೇಟ್‌ ತಾನವಾಡೆ, ‘ಲೋಬೊ ಅವರು ಪಕ್ಷ ತೊರೆದಿರುವುದರಿಂದ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಲೋಬೊ ಮಾನಸಿಕವಾಗಿ ಮೊದಲೇ ಪಕ್ಷ ತೊರೆದಿದ್ದರು. ಕೇವಲ ದೈಹಿಕವಾಗಿ ನಮ್ಮ ಜೊತೆ ಇದ್ದರು. ಕಲಂಗುಟ್‌ ಬಿಜೆಪಿ ಕಾರ್ಯಕರ್ತರು ಪಕ್ಷದ ಜೊತೆಯೇ ಇದ್ದಾರೆ. ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಈ ವಿಧಾನಸಭೆ ಕ್ಷೇತ್ರವನ್ನು ಪಕ್ಷ ಮರಳಿ ಪಡೆಯಲಿದೆ’ ಎಂದರು.

ಫೆ.14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌, ಬಿಜೆಪಿ, ಎಂಜಿಪಿ, ಜಿಎಫ್‌ಪಿ ಜೊತೆ ಈ ಬಾರಿ ಟಿಎಂಸಿ, ಎಎಪಿ, ಎನ್‌ಸಿಪಿ ಪಕ್ಷಗಳೂ ಕಣದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT