ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ರಾಜ್ಯಗಳಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರ: 102 ಮಂದಿ ಒಡಿಶಾದಲ್ಲಿ ಮೂವರ ಸಾವು
Last Updated 15 ಜುಲೈ 2022, 13:53 IST
ಅಕ್ಷರ ಗಾತ್ರ

ಅಮರಾವತಿ, ಮುಂಬೈ: ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ಕಡೆ ಪ್ರವಾಹದ ಸ್ಥಿತಿ ಉಂಟಾಗಿದೆ.

ಆಂಧ್ರದಲ್ಲಿ ಶುಕ್ರವಾರ ಸುರಿದ ಮಳೆಗೆ ಗೋದಾವರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ದೋವಲೇಶ್ವರಂನಲ್ಲಿರುವ ಸರ್ ಆರ್ಥರ್ ಕಾಟನ್ ಬ್ಯಾರೇಜ್ ಅಪಾಯದ ಮಟ್ಟ ತಲುಪಿದೆ.

‘ಬ್ಯಾರೇಜ್‌ನಲ್ಲಿ 20 ಲಕ್ಷ ಕ್ಯೂಸೆಕ್‌ಗೆ ನೀರು ಬಂದರೆ 6 ಜಿಲ್ಲೆಗಳ 42 ಮಂಡಲಗಳ ವ್ಯಾಪ್ತಿಯ 554 ಗ್ರಾಮಗಳು ಪ್ರವಾಹದ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ (ಕಂದಾಯ- ವಿಪತ್ತು ನಿರ್ವಹಣೆ) ಜಿ. ಸಾಯಿ ಪ್ರಸಾದ್ ಹೇಳಿದ್ದಾರೆ.

ಭಾರಿ ಮಳೆ (ಜೈಪುರ): ರಾಜಸ್ಥಾನದ ಗಂಗಾನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಐಎಎಫ್ ಅಧಿಕಾರಿಯ ಕುಟುಂಬದ ರಕ್ಷಣೆ: ಪುಣೆಯ ಬೊಪೊಡಿ ಪ್ರದೇಶದ ಹ್ಯಾರಿಸ್ ಸೇತುವೆಯ ಕೆಳಗೆ ಪ್ರವಾಹದಲ್ಲಿ ಸಿಲುಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಸಾಕುನಾಯಿಯನ್ನು ಶುಕ್ರವಾರ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಎಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಒಡಿಶಾದಲ್ಲಿ ಮೂವರು ಸಾವು (ಭುವನೇಶ್ವರ): ಮಳೆಯಿಂದಾಗಿ ಕಂದಮಾಲ್ ಜಿಲ್ಲೆಯಲ್ಲಿ ಗೋಡೆ ಕುಸಿದು ತಾಯಿ ಮತ್ತು ಅವರ ಐದು ವರ್ಷದ ಮಗಳು ಸಾವಿಗೀಡಾಗಿದ್ದಾರೆ. ಮಲ್ಕಾನ್ ಗಿರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಪತ್ರಕರ್ತ ಶವವಾಗಿ ಪತ್ತೆ

ಕರೀಂನಗರ (ತೆಲಂಗಾಣ): ತೆಲಂಗಾಣದಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯ ವರದಿಗೆ ತೆರಳಿದ್ದ ಸುದ್ದಿವಾಹಿನಿಯ ಪತ್ರಕರ್ತರೊಬ್ಬರು ಸಾವಿಗೀಡಾಗಿದ್ದು, ಶುಕ್ರವಾರ ಅವರ ಮೃತದೇಹ ಜಗ್ತಿಯಾಲ್ ಜಿಲ್ಲೆಯ ರಾಮ್‌ಜಿಪೇಟೆ ಬಳಿ ಪತ್ತೆಯಾಗಿದೆ.

ಜಮೀರ್ (36) ಸಾವಿಗೀಡಾದ ಪತ್ರಕರ್ತ. ಜುಲೈ 12ರಂದು ರಾಯ್ಕಲ್ ಗ್ರಾಮಕ್ಕೆ ಮಳೆ ವರದಿಗಾಗಿ ತೆರಳಿದ್ದರು. ಅಲ್ಲಿ ಅವರು ಪ್ರವಾಹದಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

100 ದಾಟಿದ ಸಾವಿನ ಸಂಖ್ಯೆ (ಮುಂಬೈ): ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಇದುವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ ಶುಕ್ರವಾರ 102 ತಲುಪಿದೆ. ರಾಜ್ಯದ 20 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದ್ದು ಅಲ್ಲಿನ 3,873 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಪರಶುರಾಮ್ ಘಾಟ್ ಪ್ರದೇಶದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಮೀನು ಹಿಡಿಯಲು ಜೀವ ಪಣಕ್ಕಿಟ್ಟ ಜನ! (ಚಂದ್ರಾಪುರ): ಮಹಾರಾಷ್ಟ್ರದ ಚಂದ್ರಾಪುರದ ಪಕಾದಿಗುಡ್ಡಂ ಅಣೆಕಟ್ಟಿನಿಂದ ಹೊರಬಿಡಲಾದ ನೀರಿನ ಸಮೀಪವೇ ಹಲವು ಮಂದಿ ಪ್ರಾಣವನ್ನೂ ಲೆಕ್ಕಿಸದೆ ಮೀನು ಹಿಡಿಯಲು ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಈ ಸಂಬಂಧ ತನಿಖೆ ನಡೆಸಿ, ಅಣೆಕಟ್ಟಿಗೆ ಜನರು ಪ್ರವೇಶಿಸದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಅಜಯ್ ಗುಲ್ಹಾನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT