ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಣೆ: ಪಿಣರಾಯಿ ವಿಜಯನ್‌ಗೆ ತನಿಖೆ ಭೀತಿ, ಪ್ರತಿಪಕ್ಷ ನಾಯಕರಿಂದ ಟೀಕೆ

ಕೇರಳ ಸಿಎಂ, ಪ್ರತಿಪಕ್ಷ ನಾಯಕರಿಂದ ಮುಂದುವರಿದ ಆರೋಪ–ಪ್ರತ್ಯಾರೋಪ
Last Updated 3 ನವೆಂಬರ್ 2020, 2:19 IST
ಅಕ್ಷರ ಗಾತ್ರ

ತಿರುವನಂತಪುರ: ಕೇಂದ್ರದ ತನಿಖಾ ಸಂಸ್ಥೆಗಳು ವ್ಯಾಪ್ತಿ ಮೀರುತ್ತಿವೆ. ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಕೇರಳದ ಮಹತ್ವದ ಮೂಲಸೌಕರ್ಯ ಯೋಜನೆಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ವಿವರ ಕೋರಿರುವ ಬೆನ್ನಲ್ಲೇ ಅವರು ಈ ಆರೋಪ ಮಾಡಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಂಬಂಧಿಸಿ ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಅವರು ಈವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯವು, ಅವರು ನಿರ್ವಹಿಸಿರುವ ಮಹತ್ವದ ಯೋಜನೆಗಳ ಬಗ್ಗೆ ವಿವರ ಕೇಳಿರುವುದು ವಿಜಯನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ‘ಕೇರಳ ಆಪ್ಟಿಕ್ ಫೈಬರ್ ನೆಟ್ವರ್ಕ್‌’ ಯೋಜನೆ ಬಗ್ಗೆ ಜಾರಿ ನಿರ್ದೇಶನಾಲಯ ವಿವರ ಕೇಳಿದೆ ಎನ್ನಲಾಗಿದೆ.

‘ತನಿಖೆ ತಮ್ಮ ಬುಡಕ್ಕೆ ಬರಬಹುದೆಂಬ ಭೀತಿ’: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯು ತಮ್ಮ ಬುಡಕ್ಕೇ ಬರಬಹುದೆಂಬ ಭೀತಿ ಪಿಣರಾಯಿ ವಿಜಯನ್ ಅವರನ್ನು ಆವರಿಸಿರುವುದು ಸ್ಪಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಟೀಕಿಸಿದ್ದಾರೆ.

‘ತನಿಖಾ ಸಂಸ್ಥೆಗಳು ಮುಖ್ಯಮಂತ್ರಿಗಳ ಕಚೇರಿವರೆಗೆ ಬರಬಹುದೆಂಬ ಸುಳಿವು ಅವರಿಗೆ (ಪಿಣರಾಯಿ ವಿಜಯನ್) ದೊರೆತಿದೆ. ಆದ ಕಾರಣ ಅವರು ತನಿಖಾ ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳಿಗೆ ಅವರೇ ‘ಉತ್ತಮ’ ಎಂಬ ಪ್ರಮಾಣಪತ್ರ ನೀಡಿದ್ದರು’ ಎಂದು ಅವರು ಹೇಳಿದ್ದಾರೆ.

ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದೇ ವಿಜಯನ್ ಅವರ ಭೀತಿಗೆ ಕಾರಣ ಎಂದು ಬಿಜೆಪಿಯ ಕೇರಳದ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

‘ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಮನವಿಯ ಮೇರೆಗೆ ಕೇರಳಕ್ಕೆ ಬಂದಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ ತನಿಖೆಯ ದಿಶೆ ತಮ್ಮತ್ತ ತಿರಗುತ್ತಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಮೊದಲು ತನಿಖೆಯನ್ನು ಸ್ವಾಗತಿಸಿದ್ದ ಅವರು ನಂತರ ಪ್ರಭಾವ ಬೀರಲು ಯತ್ನಿಸಿದ್ದಾರೆ. ನಂತರ ತನಿಖಾಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾರೆ’ ಎಂದು ಸುರೇಂದ್ರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT