ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ, ಜನರ ನಿರ್ಲಕ್ಷ್ಯ ಕೋವಿಡ್‌ ದುರಂತಕ್ಕೆ ಕಾರಣ: ಭಾಗವತ್‌

Last Updated 15 ಮೇ 2021, 17:36 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವಿರುದ್ಧದ ಹೋರಾಟ ನಿರಂತರವಾಗಿರಬೇಕು. ಸರ್ಕಾರ ಅಥವಾ ಆಡಳಿತ ಮತ್ತು ಜನರು... ಎಲ್ಲರೂ ಕೋವಿಡ್‌ ಮೊದಲ ಅಲೆಯ ಬಳಿಕ ನಿರ್ಲಕ್ಷ್ಯ ತಾಳಿದ್ದೇ ಈಗಿನ ಪರಿಸ್ಥಿತಿಗೆ ಕಾರಣ.ವೈದ್ಯರು ಎಚ್ಚರಿಕೆ ಕೊಡುತ್ತಿದ್ದರು. ಆದರೂ ನಾವು ನಿರ್ಲಕ್ಷ್ಯ ತಾಳಿದೆವು. ಹಾಗಾಗಿಯೇ ಇಷ್ಟು ದೊಡ್ಡ ಬಿಕ್ಕಟ್ಟು ಉಂಟಾಯಿತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ.

‘ಸಕಾರಾತ್ಮಕತೆಯ ಬಗ್ಗೆ ಮಾತನಾಡಲು ನನಗೆ ತಿಳಿಸಿದ್ದಾರೆ. ಅದು ಕಷ್ಟ ಏಕೆಂದರೆ, ಬಹಳ ಸಂಕಷ್ಟದ ಸಮಯದಲ್ಲಿ ನಾವು ಇದ್ದೇವೆ. ಹಲವು ಕುಟುಂಬಗಳು ತಮ್ಮ ಆತ್ಮೀಯರನ್ನು ಕಳೆದುಕೊಂಡಿವೆ. ಹಲವು ಕುಟುಂಬಗಳಲ್ಲಿ ಜೀವನಾಧಾರ ಆಗಿದ್ದವರೇ ದಿಢೀರ್‌ ಮೃತಪಟ್ಟಿದ್ದಾರೆ’ ಎಂದು ಆರ್‌ಎಸ್‌ಎಸ್‌ನ ‘ಕೋವಿಡ್‌ ರೆಸ್ಪಾನ್ಸ್‌ ಟೀಮ್‌’ ಆಯೋಜಿಸಿದ್ದ ‘ಪಾಸಿಟಿವಿಟಿ ಅನ್‌ಲಿಮಿಟೆಡ್‌’ ಎಂಬ ಉಪನ್ಯಾಸ ಮಾಲಿಕೆಯ ಕೊನೆಯ ದಿನ ಅವರು ಹೇಳಿದ್ದಾರೆ.

ವಾಸ್ತವವನ್ನು ಅಲ್ಲಗಳೆಯುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದ್ದಾರೆ. ‘ನಕಾರಾತ್ಮಕತೆ ಬೇಡ. ಏನೂ ಆಗಿಯೇ ಇಲ್ಲ, ಎಲ್ಲವೂ ಸರಿ ಇದೆ ಎಂದೂ ಹೇಳಲಾಗದು. ಪರಿಸ್ಥಿತಿಯು ಕಠಿಣವಾಗಿದೆ. ಅದು ಜನರ ದಿಕ್ಕುಗೆಡಿಸಿದೆ, ಅವರಲ್ಲಿ ನಿರಾಶೆ ಮೂಡಿಸಿದೆ ಎಂಬುದು ಬೇಸರ ಉಂಟು ಮಾಡುತ್ತದೆ. ಆದರೆ ಅಂತಹ ಪರಿಸ್ಥಿತಿ ಯಲ್ಲಿ ನಾವು ಇದ್ದೇವೆ. ಈ ಪರಿಸ್ಥಿತಿಯನ್ನು ನಾವು ಎದುರಿಸಬೇಕು ಅಷ್ಟೇ’ ಎಂದು ಭಾಗವತ್‌ ಹೇಳಿದ್ದಾರೆ.

ಸದ್ಯದ ಮಟ್ಟಿಗೆ ತಪ್ಪು ಹುಡುಕುವ ಕೆಲಸ ಮಾಡಬಾರದು. ಎಲ್ಲರೂ ಒಂದು ತಂಡವಾಗಿ ಪಿಡುಗನ್ನು ಎದುರಿಸಬೇಕು ಎಂದು ಭಾಗವತ್‌ ಸಲಹೆ ಕೊಟ್ಟಿದ್ದಾರೆ. ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಸರಿ ಇಲ್ಲ ಎಂದು ವಿರೋಧ ಪಕ್ಷಗಳೆಲ್ಲ ಸರ್ಕಾರದ ಮೇಲೆ ಮುಗಿಬೀಳುತ್ತಿರುವ ಸಂದರ್ಭದಲ್ಲಿಯೇ ಅವರು ಹೀಗೆ ಹೇಳಿದ್ದಾರೆ.

‘ವೈಜ್ಞಾನಿಕ ಮನೋಭಾವ ಇರಲಿ’
‘ಜಾಗರೂಕತೆ ಮತ್ತು ಸಕ್ರಿಯತೆ ಇವೆರಡೂ ಬಹಳ ಮುಖ್ಯ. ಯೋಗ, ಪ್ರಾಣಾಯಾಮ, ಓಂಕಾರ ಇವನ್ನೆಲ್ಲ ಅಭ್ಯಾಸಮಾಡುತ್ತಾ ನಮ್ಮನ್ನು ನಾವು ದೃಢವಾಗಿಟ್ಟುಕೊಳ್ಳಬೇಕು’ ಎಂದು ಮೋಹನ್ ಭಾಗವತ್‌ ಅವರು ಕರೆ ಕೊಟ್ಟಿದ್ದಾರೆ.

ವೈಜ್ಞಾನಿಕಮನೋಭಾವವೂ ಬೇಕು. ಯಾವುದೇ ಔಷಧಿ ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ತಜ್ಞರನ್ನು ಕೇಳಿತಿಳಿದು ನಿರ್ಧಾರಕ್ಕೆ ಬರಬೇಕು. ಸುಮ್ಮನೆ ಯಾರೋ ಹೇಳಿದರು ಎಂದು ಪರಾಮರ್ಶೆ ಮಾಡದೇ ತೆಗೆದುಕೊಳ್ಳಬಾರದು.ಹಳೆಯದೆಲ್ಲ ಒಳ್ಳೆಯದು, ಹೊಸದೆಲ್ಲ ಕೆಟ್ಟದ್ದು ಎಂಬುದೂ ಸರಿಯಲ್ಲ. ಅಥವಾ ಹೊಸದನ್ನು ಸ್ವೀಕರಿಸುತ್ತಾ,ಹಳೆಯದನ್ನು ತ್ಯಜಿಸುವುದೂ ಸರಿಯಲ್ಲ ಎಂದು ಭಾಗವತ್‌ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT