ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು: ಪ್ರಧಾನಿ ಮೋದಿ

Last Updated 30 ಸೆಪ್ಟೆಂಬರ್ 2021, 10:06 IST
ಅಕ್ಷರ ಗಾತ್ರ

ಜೈಪುರ: ‘ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಅಥವಾ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯತ್ನಿಸುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಪ್ರಸ್ತುತ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆ ನಡುವಣ ಅಂತರ ಕುಗ್ಗಿದೆ. ಸರ್ಕಾರವು ಆರೋಗ್ಯ ಕ್ಷೇತ್ರದ ಸುಧಾರಣೆಯ ಜೊತೆಗೆ ಆಯುರ್ವೇದ ಮತ್ತು ಯೋಗಕ್ಕೂ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.

ರಾಜಸ್ಥಾನ ಪೆಟ್ರೊಕೆಮಿಕಲ್ಸ್‌ ತಾಂತ್ರಿಕ ಸಂಸ್ಥೆಯ ಉದ್ಘಾಟನೆ ಹಾಗೂ ನಾಲ್ಕು ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ವರ್ಚುಯಲ್‌ ವೇದಿಕೆಯಲ್ಲಿ ಅವರು ಮಾತನಾಡಿದರು.

ಆರು ವರ್ಷದಲ್ಲಿ 170ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. 100ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕಾರ್ಯವು ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಈ ಹಿಂದಿನ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕಾರ್ಯವೈಖರಿಯನ್ನು ಉಲ್ಲೇಖಿಸಿದ ಅವರು, ಹಿಂದೆ ಅದರ ತೀರ್ಮಾನಗಳ ಬಗ್ಗೆ ಪ್ರಶ್ನೆಗಳು ಮೂಡುತ್ತಿದ್ದವು. ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕುರಿತಂತೆ ಅನುಮಾನಗಳಿದ್ದವು. ಒಟ್ಟಾರೆ ವೈದ್ಯಕೀಯ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿತ್ತು ಎಂದು ಪ್ರಧಾನಿ ಹೇಳಿದರು.

ಸಾಕಷ್ಟು ಪ್ರಯತ್ನ, ಅನೇಕ ಸವಾಲುಗಳ ನಂತರ ಸರ್ಕಾರ ಅಂತಿಮವಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಎಂಸಿಐ ಬದಲಾಗಿ ಸ್ಥಾಪಿಸುವ ಮೂಲಕ ಸುಧಾರಣೆಗೆ ಮುಂದಾಗಿದೆ. ಆಯೋಗದ ಶ್ರಮ ಈಗ ಕಾಣಿಸಲು ಆರಂಭಿಸಿದೆ ಎಂದರು.

20 ವರ್ಷದ ಹಿಂದೆ ತಾವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಸೌಲಭ್ಯ ಕುರಿತು ಅನೇಕ ಸವಾಲುಗಳಿದ್ದವು. ಸವಾಲುಗಳನ್ನು ಸ್ವೀಕರಿಸಿ ಸಂಘಟಿತ ಪ್ರಯತ್ನಗಳ ಮೂಲಕ ಪರಿಸ್ಥಿತಿಯಲ್ಲಿ ಒಟ್ಟು ಬದಲಾವಣೆಯನ್ನು ತರಲು ಒತ್ತು ನೀಡಲಾಯಿತು ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿ ತಾವು ಈ ಕ್ಷೇತ್ರದಲ್ಲಿ ಗುರುತಿಸಿದ್ದ ಲೋಪಗಳನ್ನು ಈಗ ದೇಶದಲ್ಲಿ ನಿವಾರಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಸುಧಾರಣೆಗೆ ಒತ್ತು ನೀಡಿದ್ದು, ಪರಿವರ್ತನೆಗೆ ರಾಷ್ಟ್ರೀಯ ನೀತಿಗೆ ಆದ್ಯತೆ ನೀಡಲಾಗಿದೆ ಎಂದರು.

ಆರೋಗ್ಯ ಕ್ಷೇತ್ರ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಆ ಕ್ಷೇತ್ರದ ಸಮಸ್ಯೆಗಳ ಅರಿವು ತಮಗಿದೆ. ಏಕೆಂದರೆ ನಾನು ಮುಖ್ಯಮಂತ್ರಿ ಆಗಿದ್ದೆ. ಆರೋಗ್ಯ ವ್ಯವಸ್ಥೆ ವಿಭಜನೆಗೊಂಡಿದ್ದು, ಸಂಪರ್ಕದ ಕೊರತೆ ಇದೆ. ಸುಧಾರಣೆಗೆ ರಾಷ್ಟ್ರ ಮಟ್ಟದಲ್ಲಿಯೇ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.

ಸುಧಾರಣೆಯ ದೃಷ್ಟಿಯಿಂದ ಸ್ವಚ್ಛ ಭಾರತ್‌ ಅಭಿಯಾನ್‌ನಿಂದ ಆಯುಷ್ಮಾನ್‌ ಭಾರತ್, ಆಯುಷ್ಮಾನ್‌ ಭಾರತ್‌ ಡಿಜಿಟಲ್ ಮಿಷನ್‌ ಒಳಗೊಂಡು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಹಿಂದೆ ಆರು ಏಮ್ಸ್ ಇದ್ದವು. ಈಗ 22ಕ್ಕೂ ಹೆಚ್ಚು ಏಮ್ಸ್‌ಗಳು ಇವೆ. ಏಮ್ಸ್‌ ಇರಲಿ, ವೈದ್ಯಕೀಯ ಕಾಲೇಜು ಇರಲಿ. ಅದರ ಸಂಪರ್ಕ ಜಾಲ ದೇಶದ ಪ್ರತಿಮೂಲೆಗೂ ಅದರ ನೆಟ್‌ವರ್ಕ್‌ ವಿಸ್ತರಣೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT