ಮಂಗಳವಾರ, ಆಗಸ್ಟ್ 16, 2022
29 °C

ನೀಟ್‌–2021 ಮತ್ತು ಜೆಇಇ–2021 ರದ್ದುಪಡಿಸುವ ಯೋಚನೆ ಇಲ್ಲ: ರಮೇಶ್‌ ಪೋಖ್ರಿಯಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ‘ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ’ ನೀಟ್‌–2021 ರದ್ದುಪಡಿಸುವ ಯೋಚನೆ ಇಲ್ಲ. ಜೆಇಇ ಮೇನ್‌ ಪರೀಕ್ಷೆಯನ್ನು ಹಲವು ಬಾರಿ ಬರೆಯಲು ಅವಕಾಶ ನೀಡುವ ಪ್ರಸ್ತಾವ ಪರಿಶೀಲನೆಯಲ್ಲಿ ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಗುರುವಾರ ಹೇಳಿದ್ದಾರೆ. 

ನೀಟ್‌–2021 ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ)–2021ಕ್ಕೆ ಹಿಂದಿನ ವರ್ಷದ ಪಠ್ಯಕ್ರಮವೇ ಇರಲಿದೆ. ಸಂಬಂಧಪಟ್ಟ ಎಲ್ಲರ ಜತೆಗೆ ಸಮಾಲೋಚನೆಯ ಬಳಿಕ ಪರೀಕ್ಷೆಯ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದು ಎಂದು ಪೋಖ್ರಿಯಾಲ್‌ ಹೇಳಿದ್ದಾರೆ. ವಿದ್ಯಾರ್ಥಿಗಳ ಜತೆಗೆ ಸಾಮಾಜಿಕ ಮಾಧ್ಯಮ ಮೂಲಕ ನಡೆಸಿದ ಸಂವಾದದಲ್ಲಿ ಈ ಮಾಹಿತಿ ನೀಡಿದರು. 

ಜೆಇಇ (ಮೇನ್‌) ಪರೀಕ್ಷೆಯನ್ನು ಫೆಬ್ರುವರಿ ಕೊನೆಯಲ್ಲಿ, ಮಾರ್ಚ್‌, ಏಪ್ರಿಲ್‌, ಮೇಯಲ್ಲಿ ನಾಲ್ಕು ಬಾರಿ ನಡೆಸ
ಬೇಕು. ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಅರ್ಹತೆಗೆ ಅವುಗಳ ಪೈಕಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿದ್ಯಾರ್ಥಿಗಳ ಸಲಹೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ಎಲ್ಲರ ಪ್ರತಿಕ್ರಿಯೆ ಪಡೆದು ನಿರ್ಧಾರಕ್ಕೆ ಬರಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ದಿನಗಳಂದೇ 10 ಮತ್ತು 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳನ್ನು ನಿಗದಿ ಮಾಡದಂತೆ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. 

ಮುಖ್ಯ ಪರೀಕ್ಷೆಗೆ ಮುನ್ನ ಪ್ರಾಯೋಗಿಕ ಪರೀಕ್ಷೆಗೆ ಕುಳಿತುಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದಿದ್ದರೆ, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು