ಭಾನುವಾರ, ಸೆಪ್ಟೆಂಬರ್ 19, 2021
23 °C
ಬಾಂಬೆ ಹೈಕೋರ್ಟ್‌

‘ಮೇಲ್ಮನೆಗೆ ನಾಮಕರಣ: ನಿಗದಿತ ಅವಧಿಯಲ್ಲಿ ರಾಜ್ಯಪಾಲರು ತೀರ್ಮಾನ ಮಾಡಬೇಕು‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ವಿಧಾನಪರಿಷತ್ತಿಗೆ 12 ಸದಸ್ಯರ ನಾಮಕರಣ ಕುರಿತು ಸರ್ಕಾರದ ಶಿಫಾರಸು ಕುರಿತು ಸಂವಿಧಾನಬದ್ಧ ಕರ್ತವ್ಯದ ಅನುಸಾರ ರಾಜ್ಯಪಾಲರು ನಿಗದಿತ ಅವಧಿಯಲ್ಲಿ ಪಟ್ಟಿಯನ್ನು ಅನುಮೋದಿಸುವುದು ಅಥವಾ ತಿರಸ್ಕರಿಸುವುದು ಕಡ್ಡಾಯವಾಗಿದೆ’ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ.

‘ಇದು, ರಾಜ್ಯಪಾಲರ ಸಾಂವಿಧಾನಿಕ ಜವಾಬ್ದಾರಿಯಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಹೇಳಿತು.

ರಾಜ್ಯ ವಿಧಾನಪರಿಷತ್ತಿಗೆ 12 ಸದಸ್ಯರ ನಾಮಕರಣ ಮಾಡುವ ಕುರಿತಂತೆ ಸಚಿವ ಸಂಪುಟದ ನಿರ್ಧಾರ ಒಳಗೊಂಡ ಪಟ್ಟಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯಪಾಲ ಬಿ.ಎಸ್‌.ಕೋಶಿಯಾರಿ ಅವರ ಅನುಮೋದನೆಗಾಗಿ ನವೆಂಬರ್ 2020ರಲ್ಲಿ ಕಳುಹಿಸಿದ್ದರು. ಆದರೆ, ಇದು ನನೆಗುದಿಗೆ ಬಿದ್ದಿತ್ತು.

ಈ ಕುರಿತು ತೀರ್ಮಾನ ತೆಗೆದುಕೊಳ್ಳಲು ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ನಾಸಿಕ್‌ನ ನಿವಾಸಿ ರತನ್‌ ಸೋಲಿ ಲೂತ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ಕೈಗೊಂಡಿತ್ತು.

‘15 ದಿನದಲ್ಲಿ ನಿರ್ಧಾರ ತಿಳಿಸಬಹುದು ಎಂದು ಸರ್ಕಾರ ಭಾವಿಸಿತ್ತು. ಆದರೆ, ಎಂಟು ತಿಂಗಳು ಕಳೆದಿದೆ. ಇನ್ನಷ್ಟು ವಿಳಂಬ ಮಾಡದೇ ನಿರ್ಧಾರ ತಿಳಿಸಬೇಕು. ರಾಜ್ಯಪಾಲರು ಕೋರ್ಟ್‌ಗೆ ಉತ್ತರಿಸುವ ಅಗತ್ಯವಿಲ್ಲ ಎಂಬುದು ನಿಜ. ಆದರೆ, ಸಾಂವಿಧಾನಿಕ ಕರ್ತವ್ಯ ನಿಭಾಯಿಸಲಾಗುತ್ತದೆ ಎಂದು ಭಾವಿಸುತ್ತೇವೆ’ ಎಂದೂ ಪೀಠ ಹೇಳಿತು.

ಮೇಲ್ಮನೆಯಲ್ಲಿ 12 ಸದಸ್ಯರ ಅಧಿಕಾರವಧಿ ಕಳೆದ ವರ್ಷದ ಜೂನ್‌ನಲ್ಲೇ ಮುಗಿದಿತ್ತು. ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರವು ನವಂಬರ್‌ವರೆಗೂ ಪಟ್ಟಿ ಕಳುಹಿಸಿರಲಿಲ್ಲ. ಆ ನಂತರ 12 ಜನರ ಪಟ್ಟಿಯನ್ನು ಕಳುಹಿಸಿಕೊಟ್ಟಿತ್ತು. ಆದರೆ, ಈ ಬಗ್ಗೆ ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು