ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಪ್ರಚೋದನೆ ಹಾಗೂ ಸ್ತ್ರೀ ದ್ವೇಷವನ್ನು ಹರಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಸುಗಂಧ ದ್ರವ್ಯ ಬ್ರ್ಯಾಂಡೊಂದರ ಜಾಹೀರಾತನ್ನು ತೆರವುಗೊಳಿಸುವಂತೆ ಟ್ವಿಟರ್, ಯೂಟ್ಯೂಬ್‌ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. ಜಾಹೀರಾತು ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಸಚಿವಾಲಯ ಹೇಳಿದೆ.
ಜಾಹೀರಾತಿಗೆ ಚಳವಳಿಗಾರರು, ರಾಜಕಾರಣಿಗಳಿಂದ ಹಾಗೂ ಜನಸಾಮಾನ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಜಾಹೀರಾತು ಸಾಮೂಹಿಕ ಅತ್ಯಾಚಾರವನ್ನು ಪ್ರತಿಧ್ವನಿಸುವ ಅಸಹ್ಯಕರ ಉಲ್ಲೇಖಗಳನ್ನು ಹೊಂದಿದೆ ಎನ್ನಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ನಿಷೇಧಿಸಲಾಗಿದೆ. ಜಾಹೀರಾತಿನಲ್ಲಿ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಸ್ಪಷ್ಟಪಡಿಸಿದೆ.
‘ಜಾಹೀರಾತಿನಲ್ಲಿ ಎಎಸ್‌ಸಿಐ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ನಾವು ತಕ್ಷಣವೇ ಕ್ರಮ ಕೈಗೊಂಡಿದ್ದು, ಜಾಹೀರಾತನ್ನು ಅಮಾನತಿನಲ್ಲಿರಿಸುವಂತೆ ಜಾಹೀರಾತುದಾರರಿಗೆ ಸೂಚಿಸಿದ್ದೇವೆ. ತನಿಖೆ ನಡೆಯಬೇಕಿದೆ’ ಎಂದು ಎಎಸ್‌ಸಿಐ ಹೇಳಿದೆ.
‘ವಿಡಿಯೊಗಳು ಸಭ್ಯತೆ ಅಥವಾ ನೈತಿಕತೆಯನ್ನು ಮೀರಿದ್ದು ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ. ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2021’ರ ನಿಯಮ 3(1)(ಬಿ)(ii) ಉಲ್ಲಂಘನೆಯಾಗಿದೆ’ ಎಂದು ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಬರೆದ ಪತ್ರದಲ್ಲಿ ಸಹಾಯಕ ನಿರ್ದೇಶಕ (ಡಿಜಿಟಲ್ ಮಾಧ್ಯಮ) ಕ್ಷಿತಿಜ್ ಅಗರವಾಲ್ ಉಲ್ಲೇಖಿಸಿದ್ದಾರೆ.
ಲಿಂಗದ ಆಧಾರದಲ್ಲಿ ಶೋಷಣೆ ಅಥವಾ ಅವಮಾನ ಎಸಗುವಂಥ ಮಾಹಿತಿಯನ್ನು ಹಂಚಿಕೊಳ್ಳುವುದು, ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಪ್ರಸಾರ ಮಾಡುವುದು ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2021’ರ ನಿಯಮ 3(1)(ಬಿ)(ii) ನಿಯಮದ ಅನುಸಾರ ತಪ್ಪಾಗುತ್ತದೆ.
ಜಾಹೀರಾತನ್ನು ಪ್ರಸಾರ ಮಾಡಿದ್ದ ಟಿವಿ ಚಾನೆಲ್ ಈಗಾಗಲೇ ಅದನ್ನು ತೆಗೆದುಹಾಕಿದೆ. ಟ್ವೀಟ್‌ಗಳಲ್ಲಿ ಮತ್ತು ಇತರ ವಿಡಿಯೊಗಳಲ್ಲಿಯೂ ಜಾಹೀರಾತನ್ನು ಪ್ರಸಾರ ಮಾಡುವಂತಿಲ್ಲ ಎಂದು ಸಚಿವಾಲಯ ಹೇಳಿದೆ.
‘ಸ್ತ್ರೀ ದ್ವೇಷ’ದ ಜಾಹೀರಾತು ಸಮೂಹ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ದೆಹಲಿ ಮಹಿಳಾ ಆಯೋಗ ಈ ಹಿಂದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿತ್ತು.
ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವಂಥ ಇಂತಹ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳಬೇಕು. ಮುಂದೆಂದೂ ಇಂಥ ಜಾಹೀರಾತುಗಳ ಪ್ರಸಾರವಾಗದಂತೆ ನೋಡಿಕೊಳ್ಳಲು ಸರಿಯಾದ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಒತ್ತಾಯಿಸಿದ್ದರು.
‘ಶಾಟ್’ ಸುಗಂಧ ದ್ರವ್ಯದ ಭಯಂಕರವಾದ ಜಾಹೀರಾತನ್ನು ಕೆಟ್ಟ ರೂಪದಲ್ಲಿ ಬಿಂಬಿಸಲಾಗಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಪ್ರಚೋದನೆ ನೀಡಲಾಗಿದೆ. ಇದಕ್ಕೆ ಕಂಪನಿಯ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈ ವಿಚಾರವಾಗಿ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ’ ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.