ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರಿಬ್ಬರ ಆಸ್ತಿ ಮುಟ್ಟುಗೋಲಿಗೆ ಕೇಂದ್ರದ ಆದೇಶ

ಮೊದಲ ಬಾರಿಗೆ ಯುಎಪಿಎ ಕಾಯ್ದೆ ಬಳಕೆ
Last Updated 8 ಸೆಪ್ಟೆಂಬರ್ 2020, 12:01 IST
ಅಕ್ಷರ ಗಾತ್ರ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 51 ಎ ಅಡಿಯಲ್ಲಿ ಅಮೆರಿಕ ಮೂಲದ ಮೂಲದ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ನಾಯಕ ಮತ್ತು ಘೋಷಿತ ಭಯೋತ್ಪಾದಕ ಗುರ್‌ಪತ್ವಂತ್ ಸಿಂಗ್ ಪನ್ನುನ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರ್ಕಾರ ಮಂಗಳವಾರ ಆದೇಶಿಸಿದೆ.

ಕಳೆದ ವರ್ಷ ತಿದ್ದುಪಡಿ ಮಾಡಿದ ನಂತರ ಸರ್ಕಾರವು ಯುಎಪಿಎ ಕಾಯ್ದೆಯ ಅಡಿಯಲ್ಲಿ ಉಗ್ರನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ಇದೇ ಮೊದಲು.

ಕೇಂದ್ರ ಗೃಹ ಸಚಿವಾಲಯವು ಕಳೆದ ಜುಲೈನಲ್ಲಿ ಯುಎಪಿಎ ಕಾಯ್ದೆಯ ನಿಬಂಧನೆಗಳ ಪ್ರಕಾರ ಪನ್ನುನ್ ಸೇರಿ ಇತರ ಒಂಬತ್ತು ಖಲಿಸ್ಥಾನಿ ಉಗ್ರರನ್ನು ಭಯೋತ್ಪಾದಕರು ಎಂದು ಘೋಷಿಸಿದೆ. ಪನ್ನುನ್ ಭಾರತದ ವಿರುದ್ಧ ಅಭಿಯಾನ ನಡೆಸುತ್ತಿದ್ದಾನೆ ಮತ್ತು ಸಿಖ್ ಯುವಕರನ್ನು ತನ್ನ ತಾಯ್ನಾಡಾದ ಪಂಜಾಬ್‌ನಲ್ಲಿ ಉಗ್ರಗಾಮಿ ಗುಂಪುಗಳಿಗೆ ಸೇರಲು ಪ್ರೇರೇಪಿಸುತ್ತಿದ್ದಾನೆ ಎಂದು ಸರ್ಕಾರ ತಿಳಿಸಿದೆ.

ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್‌ನ ಪರಮ್‌ಜಿತ್ ಸಿಂಗ್, ಖಲಿಸ್ತಾನ್ ಟೈಗರ್ ಫೋರ್ಸ್‌ನ ಹರ್ದೀಪ್ ಸಿಂಗ್ ನಿಜ್ಜಾರ್, ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ಗುರ್ಮಿತ್ ಸಿಂಗ್ ಬಗ್ಗ ಮತ್ತು ಅದೇ ಪಡೆಯ ರಂಜೀತ್ ಸಿಂಗ್ ಎಂಬುವವರನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸಲಾಗಿದೆ.

ಅದೇ ರೀತಿ ಪಂಜಾಬ್‌ನ ಅಮೃತಸರ ಮತ್ತು ಜಲಂಧರ್‌ನಲ್ಲಿ ಕ್ರಮವಾಗಿ ಪನ್ನುನ್ ಮತ್ತು ನಿಜ್ಜಾರ್‌ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಎಸ್‌ಎಫ್‌ಜೆ ನಡೆಸುತ್ತಿರುವ ಅಭಿಯಾನದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಆಸ್ತಿಗಳನ್ನು ಯುಎಪಿಎ ಅಡಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರವನ್ನು ಕೋರಿತ್ತು. ಪ್ರತ್ಯೇಕತಾವಾದಿ ಸಂಘಟನೆಯಾದ ಎಸ್‌ಎಫ್‌ಜೆ 'ಖಲಿಸ್ತಾನ್ಸ್ಥಾಪನೆಗೆ' ಏಕೀಕೃತ ಅಭಿಯಾನವನ್ನು ನಡೆಸುತ್ತಿದೆ ಎಂದು ಎನ್ಐಎ ಹೇಳಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಯುಎಪಿಎಯ ಬದಲಾದ ನಿಬಂಧನೆಗಳ ಅಡಿಯಲ್ಲಿ ಮೌಲಾನಾ ಮಸೂದ್ ಅಜರ್, ಹಫೀಜ್ ಸಯೀದ್, ಜಾಕಿ ಉರ್ ರೆಹಮಾನ್ ಲಖ್ವಿ ಮತ್ತು ದಾವೂದ್ ಇಬ್ರಾಹಿಂ ಅವರನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT