ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಮಠ ಪರಿಸ್ಥಿತಿ: ಅನುಮತಿ ಇಲ್ಲದೆ ಹೇಳಿಕೆ ನೀಡಬೇಡಿ

ಎನ್‌ಡಿಎಂಎಯಿಂದ ಸರ್ಕಾರಿ ಸಂಸ್ಥೆ, ಅವುಗಳ ತಜ್ಞರಿಗೆ ಕಟ್ಟುನಿಟ್ಟಿನ ಸೂಚನೆ 
Last Updated 14 ಜನವರಿ 2023, 15:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸರ್ಕಾರಿ ಸಂಸ್ಥೆಗಳು ಹಾಗೂ ಅವುಗಳ ತಜ್ಞರು ತನ್ನ ಅನುಮತಿ ಇಲ್ಲದೆಯೇ ಜೋಶಿಮಠದ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡುವಂತಿಲ್ಲ. ಪ್ರಕಟಣೆಯನ್ನೂ ಹೊರಡಿಸುವಂತಿಲ್ಲ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶನಿವಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಉತ್ತರಾಖಂಡ ಸರ್ಕಾರವೂ ಈ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

‘ಜೋಶಿಮಠದ ವಸ್ತುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ’ ಎಂದೂ ಎನ್‌ಡಿಎಂಎ ತಾಕೀತು ಮಾಡಿದೆ.

‘ಹಲವು ಸರ್ಕಾರಿ ಸಂಸ್ಥೆಗಳು ಜೋಶಿಮಠದ ಪರಿಸ್ಥಿತಿ ಕುರಿತ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ ಮಾಧ್ಯಮಗಳ ಎದುರು ತಮಗೆ ತೋಚಿದ ಹಾಗೆ ಪರಿಸ್ಥಿತಿಯನ್ನು ವ್ಯಾಖ್ಯಾನಿಸುತ್ತಿರುವುದೂ ನಮ್ಮ ಗಮನಕ್ಕೆ ಬಂದಿದೆ. ಇಂತಹ ಹೇಳಿಕೆ ಅಥವಾ ವ್ಯಾಖ್ಯಾನಗಳು ಸ್ಥಳೀಯ ನಿವಾಸಿಗಳ ಜೊತೆಗೆ ದೇಶದ ನಾಗರಿಕರನ್ನೂ ಗೊಂದಲಕ್ಕೀಡು ಮಾಡುತ್ತವೆ’ ಎಂದು ಹೇಳಿದೆ.

‘ಇದೇ 12ರಂದು ಕೇಂದ್ರ ಸರ್ಕಾರ ಹಾಗೂ ಎನ್‌ಡಿಎಂಎ ಪ್ರತ್ಯೇಕ ಸಭೆ ನಡೆಸಿದ್ದವು. ಆ ಸಭೆಗಳಲ್ಲಿ ತಜ್ಞರು ಹಾಗೂ ಸಂಸ್ಥೆಗಳ ವರ್ತನೆ ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ. ಹೀಗಾಗಿ ಜೋಶಿಮಠದ ವಿಚಾರದಲ್ಲಿ ಸಂವೇದನಾಶೀಲರಾಗಿ ವರ್ತಿಸುವಂತೆ ಎಲ್ಲಾ ಸಂಸ್ಥೆಗಳೂ ತಮ್ಮ ತಜ್ಞರಿಗೆ ತಾಕೀತು ಮಾಡಬೇಕು. ವಸ್ತುಸ್ಥಿತಿಯ ಅಧ್ಯಯನಕ್ಕೆ ವಿಜ್ಞಾನಿಗಳು ಹಾಗೂ ತಾಂತ್ರಿಕ ಪರಿಣತರನ್ನೊಳಗೊಂಡ ತಂಡ ನೇಮಿಸಲಾಗಿದೆ. ಆ ತಂಡ ಸಲ್ಲಿಸುವ ಅಂತಿಮ ವರದಿಯನ್ನು ಎನ್‌ಡಿಎಂಎ ಬಿಡುಗಡೆಗೊಳಿಸಲಿದೆ. ಅಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ತಜ್ಞರ ಮೇಲೆ ನಿರ್ಬಂಧ ವಿಧಿಸಬೇಕು’ ಎಂದೂ ಸಂಸ್ಥೆಗಳಿಗೆ ಸೂಚಿಸಿದೆ.

‘ಕೆಲ ಇನ್‌ಸ್ಟಿಟ್ಯೂಟ್‌ ಹಾಗೂ ಏಜೆನ್ಸಿಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆಯೇ ಜೋಶಿಮಠದಲ್ಲಿನ ಪರಿಸ್ಥಿತಿ ಕುರಿತ ವರದಿ ಹಾಗೂ ಮಾಹಿತಿ ಪ್ರಕಟಿಸುತ್ತಿವೆ. ಇದರಿಂದ ವಸ್ತುಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಜೊತೆಗೆ ಸಮುದಾಯದಲ್ಲಿ ಭೀತಿಯ ವಾತಾವರಣವೂ ಸೃಷ್ಟಿಯಾಗಲಿದೆ. ಹೀಗಾಗಿ ಇನ್ನು ಮುಂದೆ ಮಾಹಿತಿ ಅಥವಾ ವರದಿ ಪ್ರಕಟಿಸುವ ಮುನ್ನ ಸಂಬಂಧಪಟ್ಟ ಇಲಾಖೆ, ಸಚಿವಾಲಯ ಅಥವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT