ಮಂಗಳವಾರ, ಆಗಸ್ಟ್ 16, 2022
21 °C

ರೈತ ಮುಖಂಡರೊಂದಿಗಿನ ಐದನೇ ಸಭೆಯು ವಿಫಲ: ಡಿ. 9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತ ಸಂಘಟನೆಗಳ ಮುಖಂಡರೊಂದಿಗೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆ ಯಶಸ್ವಿಯಾಗದೆ, ಡಿಸೆಂಬರ್ 9ರಂದು ಮತ್ತೊಂದು ಸಭೆಯನ್ನು ನಡೆಸಲು ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ನಿಮ್ಮೆಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಮುಂದುವರಿಯುತ್ತದೆ ಮತ್ತು 'ಇದಕ್ಕೆ ಯಾವುದೇ ಅಡೆತಡೆಯು ಇಲ್ಲ' ಎಂದು ಆಕ್ರೋಶಗೊಂಡಿದ್ದ ರೈತರಿಗೆ ಭರವಸೆ ನೀಡಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕನಿಷ್ಠ ಬೆಂಬಲ ಬೆಲೆಯು ಮುಂದುವರಿಯುತ್ತದೆ. ಅದಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ನಾವು ತಿಳಿಸಿದ್ದೇವೆ. ಈ ಬಗ್ಗೆ ಅನುಮಾನಗಳಿದ್ದರೆ ಅದು ಆಧಾರರಹಿತ. ಯಾರಿಗಾದರೂ ಅನುಮಾನಗಳಿದ್ದರೆ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ. ರಾಜ್ಯಗಳಲ್ಲಿ ಮಂಡಿಯ ಮೇಲೆ ಪರಿಣಾಮ ಬೀರುವ ಉದ್ದೇಶ ನಮಗಿಲ್ಲ, ಅವು ಕಾನೂನಿನ ಮೂಲಕವೂ ಪರಿಣಾಮ ಬೀರುವುದಿಲ್ಲ. ಎಪಿಎಂಸಿಗಳ ಬಗ್ಗೆ ಯಾರಾದರೂ ತಪ್ಪು ಕಲ್ಪನೆ ಹೊಂದಿದ್ದರೆ, ಅದನ್ನು ಸರಿಪಡಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ' ಎಂದು ತಿಳಿಸಿದ್ದಾರೆ.

ನಾವು ರೈತರಿಂದ ಕೆಲವು ಸಲಹೆಗಳನ್ನು ಪಡೆಯಲು ಬಯಸಿದ್ದೇವು ಆದರೆ ಮಾತುಕತೆಯ ಸಮಯದಲ್ಲಿ ಅದು ಆಗಲಿಲ್ಲ. ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಪರಿಗಣಿಸುತ್ತದೆ ಎಂದು ತಿಳಿಸಿದ್ದೇವೆ. ರೈತ ಮುಖಂಡರಿಂದ ಸಲಹೆಗಳನ್ನು ಪಡೆದಿದ್ದರೆ ಪರಿಹಾರವನ್ನು ಕಂಡುಕೊಳ್ಳುವುದು ನಮಗೆ ಸುಲಭವಾಗುತ್ತಿತ್ತು. ಈಗ, ಡಿಸೆಂಬರ್ 9 ರಂದು ಮತ್ತೊಂದು ಸಭೆ ನಡೆಯಲಿದೆ ಮತ್ತು ರೈತರಿಗೆ ತಮ್ಮ ಕುಂದುಕೊರತೆಗಳನ್ನು ಪರಿಹರಿಸುವ ಭರವಸೆ ನೀಡಿದ್ದೇವೆ. ಶೀತ ಋತುಮಾನ ಮತ್ತು ಕೋವಿಡ್ -19 ಇರುವುದರಿಂದಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಪ್ರತಿಭಟನಾ ಸ್ಥಳಗಳಿಂದ ಮನೆಗೆ ಮರಳುವಂತೆ ಮಾಡಲು ರೈತ ಸಂಘದ ಮುಖಂಡರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ರೈತರ ಸುಧಾರಣೆಗೆ ಮೋದಿ ಸರ್ಕಾರ ಬದ್ಧವಾಗಿದೆ. ಮೋದಿ ಸರ್ಕಾರ ನಿಮಗೆ ಸಂಪೂರ್ಣ ಬದ್ಧವಾಗಿದೆ ಎಂದು ನಾನು ರೈತರಿಗೆ ಭರವಸೆ ನೀಡಲು ಬಯಸುತ್ತೇನೆ ಮತ್ತು ಭವಿಷ್ಯದಲ್ಲಿ ಹಾಗೆಯೇ ಉಳಿಯುತ್ತದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಹಲವಾರು ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಜೆಟ್, ಎಂಎಸ್‌ಪಿ ಮತ್ತು ರೈತರ ಆದಾಯವೂ ಹೆಚ್ಚಾಗಿದೆ. ಯೂನಿಯನ್‌ಗಳ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಲು ನಾನು ಇಷ್ಟಪಡುವುದಿಲ್ಲ. ಆದರೆ ರೈತರು ಮತ್ತು ಸಂಘಟನೆಗಳು ಪ್ರತಿಭಟನೆಯನ್ನು ಕೈಬಿಟ್ಟು ಚರ್ಚೆಗೆ ಬರಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಈಮಧ್ಯೆ, ಪ್ರತಿಭಟನಾನಿರತ ರೈತ ಸಂಘಟನೆಗಳು ಭಾರತ ಬಂದ್‌ಗೆ ಕರೆ ನೀಡಿದ್ದು, ರಾಷ್ಟ್ರವ್ಯಾಪಿ ಬಂದ್ ಡಿಸೆಂಬರ್ 8 ರಂದು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು