ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ನೇ ತರಗತಿ ಪರೀಕ್ಷೆ: 2 ದಿನದಲ್ಲಿ ನಿರ್ಧಾರ -ಕೇಂದ್ರ ಸರ್ಕಾರ

Last Updated 31 ಮೇ 2021, 8:08 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪಿಡುಗಿನ ಮಧ್ಯೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ಕುರಿತಾಗಿ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ಮತ್ತು ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರಿದ್ದ ಪೀಠಕ್ಕೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಈ ಮಾಹಿತಿ ನೀಡಿದರು.

‘ನೀವು ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಿ. ಅದಕ್ಕೆ ನೀವು ಅರ್ಹರು. ಒಂದು ವೇಳೆ ಹಿಂದಿನ ವರ್ಷದ ನೀತಿಯನ್ನು ರದ್ದುಗೊಳಿಸುವುದಿದ್ದರೆ, ಅದಕ್ಕೆ ಸರಿಯಾದ ಕಾರಣವನ್ನು ನೀಡಬೇಕು’ ಎಂದು ಪೀಠವು ತಿಳಿಸಿತು.ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿತು.

ಕಳೆದ ವರ್ಷ ಜುಲೈ 1ರಿಂದ 15ರವರೆಗೆ ನಡೆಯಬೇಕಿದ್ದ ಬಾಕಿ ಉಳಿದ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವುದಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಈ ಮಂಡಳಿಗಳು ಪ್ರಸ್ತಾಪಿಸಿದ ವಿದ್ಯಾರ್ಥಿಗಳ ಮೌಲ್ಯಮಾಪನ ಸೂತ್ರಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು.

ಪರೀಕ್ಷೆ ರದ್ದುಪಡಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವ ಮಮತಾ ಶರ್ಮಾ, ನಿರ್ದಿಷ್ಟ ಕಾಲಮಿತಿಯೊಳಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಲು ‘ವಸ್ತುನಿಷ್ಠ ಸೂತ್ರವಿಧಾನ’ ಅನುಸರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT