ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೇನಾದರೂ ಆದರೆ ಅಳಬೇಡ ಎಂದು ಹತ್ಯೆಗೆ ಮೊದಲು ಹೇಳಿದ್ದ ಇಂದಿರಾ: ರಾಹುಲ್

Last Updated 31 ಅಕ್ಟೋಬರ್ 2021, 14:47 IST
ಅಕ್ಷರ ಗಾತ್ರ

ನವದೆಹಲಿ: ‘ನನಗೇನಾದರೂ ಆದರೆ ಅಳಬೇಡ ’ ಎಂದು ಅಜ್ಜಿ ಇಂದಿರಾ ಗಾಂಧಿ ಅವರು ತಾವು ಹತ್ಯೆಯಾಗುವುದಕ್ಕೂ ಕೆಲವು ಗಂಟೆಗಳ ಮುನ್ನ ನನಗೆ ತಿಳಿಸಿದ್ದರು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 37 ನೇ ಪುಣ್ಯತಿಥಿಯಂದು, ಯೂಟ್ಯೂಬ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್‌, ಇಂದಿರಾ ಗಾಂಧಿ ಅವರ ಅಂತ್ಯಕ್ರಿಯೆಯ ದಿನವನ್ನು ‘ನನ್ನ ಜೀವನದ ಎರಡನೇ ಅತ್ಯಂತ ಕಷ್ಟಕರ ದಿನ’ ಎಂದು ಹೇಳಿದ್ದಾರೆ.

1984ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಖಲಿಸ್ಥಾನಿ ಉಗ್ರರೊಂದಿಗೆ ನಂಟು ಹೊಂದಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು.

‘ಸಾಯುವ ಆ ದಿನ ಬೆಳಿಗ್ಗೆ, ‘ನನಗೆ ಏನಾದರೂ ಆದರೆ ಅಳಬೇಡ’ ಎಂದು ಅಜ್ಜಿ ಹೇಳಿದ್ದರು. ಅವರ ಮಾತಿನ ಅರ್ಥವೇನೆಂದು ನನಗೆ ತಿಳಿಯಲಿಲ್ಲ. ಎರಡು-ಮೂರು ಗಂಟೆಗಳ ನಂತರ ಅವರು ಹತ್ಯೆಗೀಡಾದರು’ ಎಂದು ರಾಹುಲ್ ಗಾಂಧಿ ಅವರು ವಿವರಿಸಿದ್ದಾರೆ.

‘ತಮ್ಮ ಹತ್ಯೆಯಾಗುತ್ತದೆ ಎಂದು ಇಂದಿರಾ ಗಾಂಧಿ ಭಾವಿಸಿದ್ದರು. ಮತ್ತು, ಮನೆಯಲ್ಲಿ ಎಲ್ಲರಿಗೂ ಅದು ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಕಾಯಿಲೆಯಿಂದ ಸಾಯುವುದು ದೊಡ್ಡ ಶಾಪ ಎಂದು ಒಂದು ಬಾರಿ ಅವರು ಹೇಳಿದ್ದರು‘ ಎಂದು ರಾಹುಲ್‌ ಹೇಳಿದ್ದಾರೆ. 'ನನ್ನ ಪ್ರೀತಿಯ ಅಜ್ಜಿ ಇಂದಿರಾ ಜೀ ನೆನಪಿಗಾಗಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಯೂಟ್ಯೂಬ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ದೇಶಕ್ಕಾಗಿ ಮಡಿಯಲು ಇದು ಸೂಕ್ತ ಮಾರ್ಗವೆಂದು ಬಹುಶಃ ಆಕೆ ಭಾವಿಸಿದ್ದಿರಬಹುದು ಎಂದು ರಾಹುಲ್‌ ಅಭಿಪ್ರಾಯಪಟ್ಟಿದ್ದಾರೆ.

‘ನನಗೆ ಇಬ್ಬರು ತಾಯಿಯರು. ಕೋಪಗೊಂಡ ನನ್ನ ತಂದೆಯಿಂದ ರಕ್ಷಿಸುತ್ತಿದ್ದ ನನ್ನ ಅಜ್ಜಿ. ಇನ್ನೊಂದು ನನ್ನ ತಾಯಿ‘ ಎಂದಿರುವ ರಾಹುಲ್‌, ಅಜ್ಜಿ ಇಂದಿರಾ ಗಾಂಧಿ ಅವರನ್ನು ‘ಸೂಪರ್‌ ಮದರ್‌’ ಎಂದೂ ಬಣ್ಣಿಸಿದ್ದಾರೆ. ‘ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡಿದ್ದು ನನ್ನ ತಾಯಿಯನ್ನೇ ಕಳೆದುಕೊಂಡಂತೆ ಆಗಿತ್ತು’ ಎಂದೂ ಅವರು ನೋವು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT