ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ: ಶೃಂಗೇರಿ ಶಾರದಾ ಪೀಠದ ಅರ್ಚಕರಿಂದ ಪೂಜೆ

Last Updated 10 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಮತ್ತು ಪೂಜಾ ವಿಧಾನಗಳನ್ನು ಕರ್ನಾಟಕದ ಶೃಂಗೇರಿ ಶಾರದಾ ಪೀಠದ ಆರು ಅರ್ಚಕರು ನೆರವೇರಿಸಿದರು.

ಅರ್ಚಕರಾದ ಟಿ.ವಿ.ಶಿವಕುಮಾರ್ ಶರ್ಮಾ, ಕೆ.ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಕೆ.ಎಸ್.ಗಣೇಶ ಸೋಮಯಾಜಿ, ನಾಗರಾಜ ಅಡಿಗ ಅವರು ಶೃಂಗೇರಿಯಿಂದ ದೆಹಲಿಗೆ ತೆರಳಿದ್ದರು. ಶೃಂಗೇರಿ ಶಾರದಾ ಪೀಠದ ದೆಹಲಿ ಶಾಖೆಯ ರಾಘವೇಂದ್ರ ಭಟ್ ಮತ್ತು ಋಷ್ಯಶೃಂಗ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ಬೆಳಿಗ್ಗೆ 8ಕ್ಕೆ ಆರಂಭವಾದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗುರು ಪೂಜೆ, ಗಣಪತಿ ಪೂಜೆ, ಪುಣ್ಯ ವಚನ, ಅನಂತ ಪೂಜೆ, ವರಹಾ ಪೂಜೆ, ವಾಸ್ತು ಪೂಜೆ, ಕ್ಷೇತ್ರಪಾಲ ಮತ್ತು ಭುವನೇಶ್ವರಿ ಪೂಜೆಗಳನ್ನು ನೆರವೇರಿಸಲಾಯಿತು. ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರು ಕಳುಹಿಸಿದ್ದ ಬೆಳ್ಳಿಯ ಇಟ್ಟಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸದಲ್ಲಿ ಬಳಸಿದರು.

‘ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅರ್ಚಕರ ವ್ಯವಸ್ಥೆಯನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸೂಚಿಸಿದ್ದರು. ನಾನು ಭಾರತೀ ತೀರ್ಥ ಸ್ವಾಮೀಜಿ ಅವರನ್ನು ಕೇಳಿಕೊಂಡೆ. ಅವರು ತಮ್ಮ ಅರ್ಚಕರನ್ನು ಕಳುಹಿಸಲು ಒಪ್ಪಿಕೊಂಡರು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅವರು ಹೇಳಿದರು.

13ನೇ ಶತಮಾನದ ‘ಮ್ಯಾಗ್ನಾ ಕಾರ್ಟಾ’ವನ್ನು ಆಧುನಿಕ ಗಣರಾಜ್ಯದ ಮೂಲಗ್ರಂಥ ಎಂದು ಭಾರತೀಯರು ಪರಿಗಣಿಸುತ್ತಾರೆ. ಆದರೆ ಭಾರತದ ಪ್ರಜಾಪ್ರಭುತ್ವವನ್ನು ‘ಪ್ರಜಾಪ್ರಭುತ್ವದ ತಾಯಿ’ ಎಂದು ಕರೆಯುವ ದಿನ ದೂರವಿಲ್ಲ

- ನರೇಂದ್ರ ಮೋದಿ, ಪ್ರಧಾನಿ

***

ನೂತನ ಸಂಸತ್ ಭವನವನ್ನು ಭಾರತೀಯರೇ ನಿರ್ಮಿಸಲಿದ್ದಾರೆ. ಆತ್ಮನಿರ್ಭರ ಭಾರತಕ್ಕೆ ಇದು ಅತ್ಯುತ್ತಮ ಉದಾಹರಣೆ. ಇದು ದೇಶದ ಜನರಿಗೆ ಅತ್ಯಂತ ಹೆಮ್ಮೆಯ ವಿಚಾರ

- ಓಂ ಪ್ರಕಾಶ್ ಬಿರ್ಲಾ, ಲೋಕಸಭಾ ಸ್ಪೀಕರ್

***
ಇದು ಅತ್ಯಂತ ಮಹತ್ವಪೂರ್ಣವಾದ ಯೋಜನೆ. ಇದು ಸಫಲವಾಗಲಿ ಎಂದು ಆಶಿಸುತ್ತೇನೆ. ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ದೊರೆತಿದ್ದಕ್ಕೆ ಸಂತೋಷವಾಗಿದೆ

- ರತನ್ ಟಾಟಾ, ಟಾಟಾ ಸನ್ಸ್ ಮುಖ್ಯಸ್ಥ

***

16 ದಿನಗಳಿಂದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ತಮಗಾಗಿ ಅರಮನೆ ನಿರ್ಮಿಸುತ್ತಿದ್ದರು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಲಿದೆ

- ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT