ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಸಂಪುಟ: ಹಳಬರೆಲ್ಲರಿಗೂ ಕೊಕ್

Last Updated 16 ಸೆಪ್ಟೆಂಬರ್ 2021, 17:31 IST
ಅಕ್ಷರ ಗಾತ್ರ

ಗಾಂಧಿನಗರ: ಗುಜರಾತ್‌ನ ನೂತನ ಸಚಿವ ಸಂಪುಟದ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿಕಟಪೂರ್ವ ಮುಖ್ಯಮಂತ್ರಿ ವಿಜಯ ರೂಪಾಣಿ ಅವರ ಸಂಪುಟದಲ್ಲಿ ಇದ್ದ ಎಲ್ಲಾ ಸಚಿವರನ್ನು ಕೈಬಿಡಲಾಗಿದ್ದು, 24 ಜನ ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಮುಖ್ಯಮಂತ್ರಿಯೂ ಸೇರಿ ಸಚಿವ ಸಂಪುಟದ ಸದಸ್ಯರ ಸಂಖ್ಯೆ 25ಕ್ಕೆ ಏರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನವೇ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳನ್ನು ಸಮಾಧಾನಪಡಿಸಲು ಬಿಜೆಪಿ ಯತ್ನಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಸಂಪುಟದ ಸದಸ್ಯರು ಬುಧವಾರ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಹಿಂದಿನ ಸಂಪುಟದ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ಬುಧವಾರದ ಕಾರ್ಯಕ್ರಮ ರದ್ದಾಗಿತ್ತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಸಂಪುಟದ ಸದಸ್ಯರಲ್ಲಿ ಹಲವರಿಗೆ ಸ್ಥಾನ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೆ ವ್ಯತಿರಿಕ್ತವಾಗಿ ಹಳಬರೆಲ್ಲರನ್ನೂ ನೂತನ ಸಂಪುಟದಿಂದ ಕೈಬಿಡಲಾಗಿದೆ.

10 ಜನರಿಗೆ ಸಂಪುಟ ದರ್ಜೆ, 14 ಜನರಿಗೆ ರಾಜ್ಯ ಸಚಿವರ ಸ್ಥಾನ ನೀಡಲಾಗಿದೆ. ರಾಜ್ಯ ಸಚಿವರಲ್ಲಿ ಐವರಿಗೆ ಸ್ವತಂತ್ರ ಹೊಣೆಗಾರಿಕೆ ಇದೆ. ಸಚಿವ ಸಂಪುಟದಲ್ಲಿ ಇರುವ ಮಹಿಳೆಯರ ಸಂಖ್ಯೆ ಎರಡು.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರನ್ನು ಹೊರತುಪಡಿಸಿ, ಪಾಟೀದಾರ್ ಸಮುದಾಯದ ಇನ್ನೂ ಆರು ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇತರೆ ಹಿಂದುಳಿದ ವರ್ಗಗಳ ಆರು ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಪರಿಶಿಷ್ಟ ಪಂಗಡದ ಆರು ಜನರಿಗೆ ಮತ್ತು ಪರಿಶಿಷ್ಟ ಜಾತಿಗಳ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬ್ರಾಹ್ಮಣ ಮತ್ತು ಕ್ಷತ್ರಿಯ ಸಮುದಾಯದ ತಲಾ ಇಬ್ಬರಿಗೆ ಹಾಗೂ ಜೈನ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಪಾಟೀದಾರ್ ಸಮುದಾಯಕ್ಕೆ ಏಳು ಸಚಿವ ಸ್ಥಾನ ನೀಡುವ ಮೂಲಕ, ಸಮುದಾಯವನ್ನು ಓಲೈಸಲು ಬಿಜೆಪಿ ಯತ್ನಿಸಿದೆ. ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಮೀಸಲಾತಿ ಹೋರಾಟದಿಂದ ಪಕ್ಷದ ಮೇಲೆ ಉಂಟಾಗಿದ್ದ ಅಸಮಾಧಾನವನ್ನು ಹೋಗಲಾಡಿಸಲು ಯತ್ನಿಸಲಾಗಿದೆ. ಅಲ್ಲದೆ ರಾಜ್ಯದ ಬಹುತೇಕ ಎಲ್ಲಾ ಜಾತಿ-ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಈ ಮೂಲಕ ಎಲ್ಲರನ್ನೂ ಓಲೈಸಲು ಬಿಜೆಪಿ ಮುಂದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ಎರಡು ಚುನಾವಣೆಗಳಲ್ಲಿ ಕಾಡ್ವಾ ಪಾಟೀದಾರ್ ಸಮುದಾಯವು ಬಿಜೆಪಿಯಿಂದ ದೂರ ಸರಿದಿದೆ. ಈ ಸಮುದಾಯವನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ದೊಡ್ಡ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿ ಶಾಸಕರಾಗಿದ್ದ ಭೂಪೇಂದ್ರ ಪಟೇಲ್ ಅವರು ಕಾಡ್ವಾ ಪಾಟೀದಾರ್ ಸಮುದಾಯದವರು. ಈ ಸಮುದಾಯವನ್ನು ಓಲೈಸುವ ಉದ್ದೇಶದಿಂದಲೇ ಭೂಪೇಂದ್ರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಿಜಯ ರೂಪಾಣಿ ಅವರ ಸಂಪುಟದಲ್ಲಿ ರಾಜ್ಯದ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆತಿರಲಿಲ್ಲ. ಅಲ್ಲದೆ, ಆ ಸಂಪುಟ ಸದಸ್ಯರು ಪಕ್ಷದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕಾರಣ ಅವರನ್ನು ನೂತನ ಸಂಪುಟದಿಂದ ಕೈಬಿಡಲಾಗಿದೆ. ಅಲ್ಲದೆ, ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಪಕ್ಷದ ನೀತಿ. ಹೀಗಾಗಿ ಹೊಸಬರಿಗೇ ಅವಕಾಶ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಹಿಂದಿನ ಸಂಪುಟದಲ್ಲಿ ಇದ್ದ ಪಕ್ಷದ ಹಿರಿಯ ಮುಖಂಡ ಮತ್ತು ಉಪಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್‌ ಮತ್ತಿತರರು ಈ
ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪುಟ ದರ್ಜೆ ಸಚಿವರು: ರಾಜೇಂದ್ರ ತ್ರಿವೇದಿ, ಜಿತು ವಘಾನಿ, ರುಷಿಕೇಶ್‌ ಪಟೇಲ್‌, ಪೂರ್ಣೇಶ್‌ ಮೋದಿ, ರಾಘವ್‌ಜಿ ಪಟೇಲ್‌, ಕಾನುಭಾಯಿ ದೇಸಾಯಿ, ಕಿರಿಟ್‌ಸಿನ್ಹ ರಾಣಾ, ನರೇಶ್‌ ಪಟೇಲ್‌, ಪ್ರದಿಪ್‌ ಪರಮಾರ್‌, ಅರ್ಜುನ್‌ಸಿನ್ಹ ಚೌಹಾಣ್‌.

***
ಇವರೆಲ್ಲರೂ ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗೆ ಮತ್ತು ಪಕ್ಷದ ಸಿದ್ಧಾಂತಗಳಿಗೆ ಮುಡಿಪಾಗಿಟ್ಟ ಅಸಾಧಾರಣ ಕಾರ್ಯಕರ್ತರು. ಅವರಿಗೆ ಅಭಿನಂದನೆಗಳು.
ನರೇಂದ್ರ ಮೋದಿ, ಪ್ರಧಾನಿ
***
ಅಧಿಕಾರ ಬರುತ್ತದೆ, ಹೋಗುತ್ತದೆ ಇಂತಹ ಬೆಳವಣಿಗೆಯಿಂದ ಬೆಂಬಲಿಗರಿಗೆ ಬೇಸರವಾಗುತ್ತದೆ. ಸಮಾಧಾನಪಡಿಸುವ ಕೆಲಸ ಪಕ್ಷದ ವರಿಷ್ಠರದ್ದು
- ನಿತಿನ್ ಪಟೇಲ್, ಗುಜರಾತ್‌ನ ನಿಕಟಪೂರ್ವ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT