ಶುಕ್ರವಾರ, ಸೆಪ್ಟೆಂಬರ್ 30, 2022
25 °C

ಅಫ್ಗಾನಿಸ್ತಾನದ ಪ್ರಜೆ ಬಂಧನ: ₹ 20 ಕೋಟಿ ಮೌಲ್ಯದ 4 ಕೆ.ಜಿ ಹೆರಾಯಿನ್ ವಶ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಮತ್ತು ದೆಹಲಿ ಅಪರಾಧ ದಳದ ಜಂಟಿ ಕಾರ್ಯಾಚರಣೆಯಲ್ಲಿ ಅಫ್ಗಾನಿಸ್ತಾನ ಪ್ರಜೆಯನ್ನು ಬಂಧಿಸಲಾಗಿದ್ದು, ಆತನಿಂದ ₹20 ಕೋಟಿ ಬೆಲೆಯ 4 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಎನ್‌ಸಿಆರ್‌ನಲ್ಲಿ ವಾಸಿಸುತ್ತಿರುವ ಅಫ್ಗಾನಿಸ್ತಾನದ ಪ್ರಜೆ ವಹಿದುಲ್ಲಾ ರಹೀಮುಲ್ಲಾ ಎಂಬಾತ ಶುಕ್ರವಾರ ರಾತ್ರಿ ವಸಂತ್ ಕುಂಜ್ ಪ್ರದೇಶದಲ್ಲಿ ಭಾರಿ ಪ್ರಮಾಣದ ಹೆರಾಯಿನ್ ಅನ್ನು ಸರಬರಾಜು ಮಾಡಲಿದ್ದಾನೆ ಎಂಬ ಬಗ್ಗೆ ಎಟಿಎಸ್‌ಗೆ ಸುಳಿವು ಸಿಕ್ಕಿತ್ತು ಎಂದು ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಟಿಎಸ್ ಮತ್ತು ದೆಹಲಿ ಅಪರಾಧ ವಿಭಾಗದ ಜಂಟಿ ಕಾರ್ಯಾಚರಣೆಯಲ್ಲಿ ರಾತ್ರಿ 11 ರಿಂದ 11.30 ರ ಸುಮಾರಿಗೆ ದಾಳಿ ನಡೆಸಲಾಯಿತು. ರಹೀಮುಲ್ಲಾನನ್ನು ಬಂಧಿಸಲಾಗಿದ್ದು, ಆತನಿಂದ 4 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಳ್ಳಲಾದ ಕಳ್ಳಸಾಗಣೆಯ ಹೆರಾಯಿನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 20 ಕೋಟಿ ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಫ್ಗನ್ ಪ್ರಜೆ ವಿರುದ್ಧ ಎನ್‌ಡಿಪಿಎಸ್‌‌ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ)ಯ ಸಂಬಂಧಿತ ಹಲವು ಸೆಕ್ಷನ್ ಅಡಿ ದೆಹಲಿ ಅಪರಾಧ ವಿಭಾಗವು ಪ್ರಕರಣ ದಾಖಲಿಸಿಕೊಂಡಿದೆ.

ಬಂಧಿತ ಆರೋಪಿಯು ಅಫ್ಗಾನಿಸ್ತಾನದ ಕಂಧಾರ್ ಮೂಲದವನಾಗಿದ್ದು, ವೈದ್ಯಕೀಯ ವೀಸಾದ ಮೇಲೆ 2016ರಲ್ಲಿ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಬಂದಿದ್ದನು. ವೀಸಾವನ್ನು ವಿಸ್ತರಿಸುವ ಮೂಲಕ ಭಾರತದಲ್ಲೇ ಉಳಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು