ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ | ಗುಜರಾತ್‌ ಮುಖ್ಯಮಂತ್ರಿ ಕೈಗೊಂಬೆ: ಕೇಜ್ರಿವಾಲ್‌

Last Updated 22 ನವೆಂಬರ್ 2022, 20:53 IST
ಅಕ್ಷರ ಗಾತ್ರ

ದೇವಭೂಮಿ ದ್ವಾರಕಾ (ಗುಜರಾತ್‌): ಭೂಪೇಂದ್ರ ಪಟೇಲ್‌ ಅವರು ಗುಜರಾತ್‌ನ ‘ಕೈಗೊಂಬೆ ಮುಖ್ಯಮಂತ್ರಿ. ತಮ್ಮ ಪಿಯೋನ್‌ ನೇಮಕ ಮಾಡಿಕೊಳ್ಳಲೂ ಅವರಿಗೆ ಆಗುವುದಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ದೇವಭೂಮಿ ದ್ವಾರಕಾದ ಖಂಭಲಿಯಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಅವರು ಮಂಗಳವಾರ ಮಾತನಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ರಹಸ್ಯ ಒಪ್ಪಂದ ಆಗಿದೆ ಎಂದೂ ಅವರು ಆರೋ‍ಪಿಸಿದ್ದಾರೆ.

‘ಗುಜರಾತ್‌ನ ಜನರ ಮುಂದೆ ಎರಡು ಮುಖಗಳಿವೆ. ಒಂದು ಈಸುದಾನ್‌ ಗಢವಿ ಮತ್ತು ಇನ್ನೊಂದು ಭೂಪೇಂದ್ರ ಪಟೇಲ್‌. ಯಾರಿಗೆ ಮತ ಹಾಕುವಿರಿ ಮತ್ತು ಯಾರನ್ನು ಮುಖ್ಯಮಂತ್ರಿ ಮಾಡುವಿರಿ’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

‘ಗಢವಿ ಯುವಕ, ಸುಶಿಕ್ಷಿತ ವ್ಯಕ್ತಿ. ಅವರ ಮನವು ಬಡವರಿಗಾಗಿ ಮಿಡಿಯುತ್ತದೆ. ಅವರು ರೈತನ ಮಗನೂ ಹೌದು. ಅವರು ಟಿ.ವಿ. ಸುದ್ದಿವಾಹಿನಿ ನಿರೂಪಕರಾಗಿದ್ದಾಗ ರೈತರ ಸಮಸ್ಯೆಗಳಿಗೆ ಬೆಳಕು ಚೆಲ್ಲಿದ್ದರು. ರೈತರು ಮತ್ತು ನಿರುದ್ಯೋಗಿ ಯುವಜನರಿಗಾಗಿ ಅವರು ಕೆಲಸ ಮಾಡಿದ್ದರು. ಆದರೆ, ಇನ್ನೊಂದೆಡೆ ಭೂಪೇಂದ್ರ ಪಟೇಲ್‌ ಇದ್ದಾರೆ. ಅವರಿಗೆ ಅಧಿಕಾರವೇ ಇಲ್ಲ. ಅವರು ಕೈಗೊಂಬೆ ಮಾತ್ರ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಅವರು (ಭೂಪೇಂದ್ರ) ಒಳ್ಳೆಯ ಮನುಷ್ಯ, ಅವರು ತುಂಬಾ ಧಾರ್ಮಿಕತೆ ಇರುವ ಮನುಷ್ಯ ಎಂದು ಕೇಳಿದ್ದೇನೆ. ಆದರೆ, ಅವರ ಮಾತನ್ನು ಯಾರೂ ಕೇಳುವುದಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖಂಭಲಿಯಾದಲ್ಲಿ ಸೋಮವಾರ ಸಮಾವೇಶ ನಡೆಸಿದ್ದರು. ಸಮಾವೇಶದಲ್ಲಿ ಹಾಕಿದ್ದ ಕುರ್ಚಿಗಳು ಖಾಲಿ ಇದ್ದವು. ಖಂಭಲಿಯಾದ ಜನರು ಸಮಾವೇಶಕ್ಕೆ ಹೋಗಿಲ್ಲ. ಆದರೆ, ಇಂದು ಸಾವಿರಾರು ಜನರು ಬಂದಿದ್ದಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಸಂಬಂಧ ಹೇಗಿದೆ ಎಂದರೆ, ಮದುವೆಗೆ ಮುನ್ನ ರಹಸ್ಯವಾಗಿ ಭೇಟಿಯಾಗುವ ಹುಡುಗ–ಹುಡುಗಿ ರೀತಿ. ಕೇಳಿದರೆ, ತಮ್ಮ ನಡುವೆ ಸ್ನೇಹದ ಹೊರತು ಬೇರೇನೂ ಇಲ್ಲ ಎನ್ನುತ್ತಾರೆ. ಹಾಗೆಯೇ ಇವರನ್ನು (ಬಿಜೆಪಿ–ಕಾಂಗ್ರೆಸ್‌) ಕೇಳಿದರೂ ತಮ್ಮ ನಡುವೆ ಸ್ನೇಹ ಬಿಟ್ಟು ಬೇರೇನೂ ಇಲ್ಲ ಎನ್ನುತ್ತಾರೆ. ಇದೆಲ್ಲ ಸಾಕು. ನಿಮ್ಮ ರಹಸ್ಯ ಬಯಲಾಗಿದೆ. ನೀವು ಮದುವೆ ಆಗಿ ಎಂದು ನಾನು ಹೇಳುತ್ತಿದ್ದೇನೆ’ ಎಂದು ಕೇಜ್ರಿವಾಲ್‌ ವಿವರಿಸಿದ್ದಾರೆ.

‘ಬ್ಯಾನರ್‌ ಪಕ್ಷ ಎಎಪಿ’ ಗೆಲ್ಲಲಾಗದು: ನಡ್ಡಾ

ಅಹಮದಾಬಾದ್‌ (ಪಿಟಿಐ): ಎಎಪಿ ಬ್ಯಾನರ್‌ ಅನ್ನು ಅವಲಂಬಿಸಿರುವ ಪಕ್ಷ. ಹಾಗಾಗಿ, ಆ ‍ಪಕ್ಷವು ಗೆಲ್ಲುವ ಸಾಧ್ಯತೆಯೇ ಇಲ್ಲ. ಆದರೆ, ಬಿಜೆಪಿ ಕಾರ್ಯಕರ್ತರನ್ನು ಅವಲಂಬಿಸಿರುವ ಪಕ್ಷ. ಚುನಾವಣೆ ಮುಗಿದ ಕೂಡಲೇ ಎಎಪಿ ಮುಖಂಡರು ರಾಜ್ಯ ಬಿಟ್ಟು ಹೋಗಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಂಚಮಹಲ್‌ ಜಿಲ್ಲೆಯ ಶೆಹ್ರಾ ಎಂಬಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಎಎಪಿ ತೀರಾ ಇತ್ತೀಚೆಗೆ ಸೋತಿದೆ. ಹಿಮಾಚಲ ಪ್ರದೇಶದ ಎಲ್ಲ 67 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ. ಗುಜರಾತ್‌ನಲ್ಲಿಯೂ ಹಾಗೆಯೇ ಆಗಲಿದೆ ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಬ್ಯಾನರ್‌ ಕಟ್ಟುವ ಕೆಲಸವನ್ನಷ್ಟೇ ಮಾಡುವುದರಿಂದ ಗೆಲ್ಲಲು ಸಾಧ್ಯವೇ? ಬಿಜೆಪಿ ಕಾರ್ಯಕರ್ತರನ್ನು ಆಧಾರಿಸಿರುವ ಪಕ್ಷವಾಗಿದ್ದು, ಜನರಿಗೆ ಸೇವೆ ಒದಗಿಸುತ್ತದೆ’ ಎಂದು ನಡ್ಡಾ ಹೇಳಿದರು.

ಕಾಂಗ್ರೆಸ್ ಪಕ್ಷವು ಬಡವರಿಗಾಗಿ ಮೊಸಳೆ ಕಣ್ಣೀರು ಹರಿಸುತ್ತಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಡವರು ಮತ್ತು ಹಿಂದುಳಿದ ವರ್ಗಗಳ ಜನರ ಸ್ಥಿತಿಯನ್ನು ಬದಲಾಯಿಸಿತು ಎಂದು ನಡ್ಡಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT