ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gujarat Elections | ನಾನು ನಿಮ್ಮ ಸಹೋದರ, ನನಗೂ ಒಂದು ಅವಕಾಶ ಕೊಡಿ: ಕೇಜ್ರಿವಾಲ್

Last Updated 3 ನವೆಂಬರ್ 2022, 10:01 IST
ಅಕ್ಷರ ಗಾತ್ರ

ನವದೆಹಲಿ: ‘ಗುಜರಾತ್‌ ಚುನಾವಣೆಯಲ್ಲಿ ನಾವು ಖಂಡಿತಾ ಗೆಲುವು ಸಾಧಿಸಲಿದ್ದೇವೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ‘ನಾನು ನಿಮ್ಮ ಸಹೋದರ. ನಿಮ್ಮ ಕುಟುಂಬದ ಸದಸ್ಯ. ನನಗೆ ಒಂದು ಅವಕಾಶ ಕೊಡಿ. ನಾನು ನಿಮಗೆ ಉಚಿತ ವಿದ್ಯುತ್ ಕೊಡುತ್ತೇನೆ, ಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟಿಸುತ್ತೇನೆ. ನಿಮ್ಮನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸುತ್ತೇನೆ’ ಎಂದು ಹೇಳಿದ್ದಾರೆ.

‘ಗುಜರಾತ್‌ನ ಜನರಿಗೆ ನನ್ನ ಪ್ರೀತಿಪೂರ್ವಕ ಸಂದೇಶ’ ಎನ್ನುವ ತಲೆಬರಹದೊಂದಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ನಿಮಿಷದ ವಿಡಿಯೊವನ್ನು ಬಿಡುಗಡೆ ಮಾಡಿರುವ ಕೇಜ್ರಿವಾಲ್‌ ಅವರು, ಮತದಾರರಿಗೆ ಹಲವು ಆಶ್ವಾಸನೆಗಳನ್ನು ನೀಡಿದ್ದಾರೆ.

ಈ ವರ್ಷಾರಂಭದಲ್ಲಿ ನಡೆದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಅಧಿಕಾರ ಪಡೆದುಕೊಂಡಿರುವ ಆಮ್‌ ಆದ್ಮಿ ಪಕ್ಷ, ಗುಜರಾತ್‌ನಲ್ಲಿ ಅಬ್ಬರದ ಪ್ರಚಾರವನ್ನು ಮಾಡುತ್ತಿದೆ. ಇದೀಗ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಉಚಿತ ಭರವಸೆಗಳ ಮೂಲಕ ಕೇಜ್ರಿವಾಲ್‌ ಮತದಾರರ ಮನಸು ಗೆಲ್ಲಲು ಹೊರಟಿದ್ದಾರೆ.

ಕಳೆದೆರಡು ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿದ್ದು, ಈ ಬಾರಿ ಭಾರೀ ಉಮೇದಿನೊಂದಿಗೆ ಆಮ್‌ ಆದ್ಮಿ ಪಕ್ಷ ಚುನಾವಣಾ ಕಣಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವೂ ಆಗಿರುವುದರಿಂದ ಈ ಚುನಾವಣೆಯನ್ನು ಆಡಳಿತರೂಢ ಬಿಜೆಪಿ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಬಿಜೆಪಿ ಮೇಲೆ ಆಪ್‌ ಭ್ರಷ್ಟಾಚಾರದ ಆರೋಪ
ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಆಮ್‌ ಆದ್ಮಿ ಪಕ್ಷವು ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಕೆಲ ದಿನಗಳ ಹಿಂದೆ 130 ಜನರ ಸಾವಿಗೆ ಕಾರಣವಾಗಿದ್ದ ಮೊರ್ಬಿ ತೂಗು ಸೇತುವೆ ಬಿಜೆಪಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಆಮ್‌ ಆದ್ಮಿ ಪಕ್ಷವು ಆರೋಪಿಸಿದೆ.

‘ಒಟ್ಟು 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಕನಿಷ್ಠ 90-95 ರಷ್ಟು ಸ್ನಾನಗಳನ್ನು ಗೆಲ್ಲುತ್ತೇವೆ. ಇದೇ ವಾತಾವರಣ ಮುಂದುವರಿದರೆ 140-150 ರಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ’ ಎಂದು ಆಮ್‌ ಆದ್ಮಿ ಪಕ್ಷದ ಹಿರಿಯ ವಕ್ತಾರ ಸೌರಭ್‌ ಭಾರಧ್ವಜ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT