ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಖರ್ಗೆ ಬಗ್ಗೆ ಗೌರವ ಇದೆ ಆದರೆ...: ಪ್ರಧಾನಿ ಮೋದಿ ಹೇಳಿದ್ದೇನು?

ನನ್ನನ್ನು ಹೆಚ್ಚು ಹೀಯಾಳಿಸಲು, ತೀಕ್ಷ್ಣ ಮಾತುಗಳಿಂದ ಅವಮಾನ ಮಾಡಲು ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ: ಮೋದಿ
Last Updated 1 ಡಿಸೆಂಬರ್ 2022, 9:32 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ರಾಮ ಭಕ್ತರ ರಾಜ್ಯದಲ್ಲಿ ಒಬ್ಬರನ್ನು ರಾವಣ ಎಂದು ಕರೆಯುವುದು ಸರಿಯಲ್ಲ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ, ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ಗುಜರಾತ್‌ನ ಕಾಳೋಲದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿಯನ್ನು ಹೆಚ್ಚು ಹೀಯಾಳಿಸಲು, ತೀಕ್ಷ್ಣ ಮಾತುಗಳಿಂದ ಅವಮಾನ ಮಾಡಲು ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ‘ ಎಂದು ವ್ಯಂಗ್ಯವಾಡಿದರು.

‘ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ನಾಯಕರೊಬ್ಬರು ಮೋದಿ ನಾಯಿಯ ಹಾಗೆ ಸಾಯುತ್ತಾರೆ ಎಂದು ಹೇಳಿದ್ದರು. ಇನ್ನೊಬ್ಬರು, ಮೋದಿ, ಹಿಟ್ಲರ್ ರೀತಿ ಸಾಯುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಂದು ವೇಳೆ ನನಗೇನಾದರೂ ಅವಕಾಶ ಸಿಕ್ಕರೆ ನಾನು ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದಾರೆ. ಕೆಲವರು ರಾವಣ ಎಂದು ಕರೆಯುತ್ತಾರೆ. ಇನ್ನು ಕೆಲವರು ರಾಕ್ಷಸ ಎನ್ನುತ್ತಾರೆ. ಜಿರಳೆ ಎಂದೂ ಕರೆಯುತ್ತಾರೆ. ಕಾಂಗ್ರೆಸ್‌ ನಾಯಕರ ಈ ಮಾತು ನನಗೆ ಆಶ್ಚರ್ಯ ಉಂಟು ಮಾಡುತ್ತಿಲ್ಲ. ಇಷ್ಟಾಗಿಯೂ ಕಾಂಗ್ರೆಸ್‌ಗೆ ಪಶ್ಚಾತಾಪ ಇಲ್ಲ. ನರೇಂದ್ರ ಮೋದಿ, ಈ ದೇಶದ ಪ್ರಧಾನಿಯನ್ನು ಅವಮಾನ ಮಾಡುವುದು ಸರಿ ಎಂದು ಕಾಂಗ್ರೆಸ್‌ ತಿಳಿದುಕೊಂಡಿದೆ‘ ಎಂದು ಮೋದಿ ಮಾರ್ಮಿಕವಾಗಿ ನುಡಿದರು.

ಅಹಮದಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳು. ಆದರೆ ಅವರು ತಮ್ಮ ಕೆಲಸವನ್ನು ಮರೆತು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರತೀ ಬಾರಿಯೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ನೀವು ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಎಷ್ಟು ಬಾರಿ ನಿಮ್ಮ ಮುಖ ನೋಡಬೇಕು? ನಿಮಗೆ ಎಷ್ಟು ಅವತಾರ ಇದೆ? ನಿಮಗೇನು ರಾವಣನ ಹಾಗೆ 100 ತಲೆ ಇದೆಯೇ?‘ ಎಂದು ಖರ್ಗೆ ಪ್ರಶ್ನೆ ಮಾಡಿದ್ದರು.

ಇದಾದ ಬಳಿಕ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಮಧುಸೂಧನ ಮಿಸ್ತ್ರಿ ಕೂಡ ಮೋದಿ ವಿರುದ್ಧ ಕಿಡಿ ಕಾರಿದ್ದರು. ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆ ಮಾತನಾಡುತ್ತಾ, ‘ನಾವು ನರೇಂದ್ರ ಮೋದಿಯವರಿಗೆ ಅವರ ಸ್ಥಾನಮಾನ ತೋರಿಸಬೇಕೆಂದಿದ್ದೇವೆ‘ ಎಂದು ಹೇಳಿದ್ದರು.

ಇಬ್ಬರು ಕಾಂಗ್ರೆಸ್‌ ನಾಯಕರ ಈ ಹೇಳಿಕೆ ಮೋದಿ ತಿರುಗೇಟು ನೀಡಿದ್ದಾರೆ. ‘ಈ ಚುನಾವಣೆಯಲ್ಲಿ ಮೋದಿಯವರಿಗೆ ನಾವು ಅವರ ಸ್ಥಾನಮಾನ ತೋರಿಸಬೇಕು ಎಂದು ಹೇಳಿದ್ದಾರೆ. ಇನ್ನೂ ಹೆಚ್ಚಿನದು ಹೇಳಬೇಕು ಎಂದು ಕಾಂಗ್ರೆಸ್‌ ಬಯಸಿದೆ. ನನಗೆ ಖರ್ಗೆ ಅವರ ಬಗ್ಗೆ ಗೌರವ ಇದೆ. ಆದರೆ ಅವರು ಏನು ಹೇಳಬೇಕಿತ್ತೋ, ಅದನ್ನು ಮಾತ್ರ ಹೇಳಬೇಕಿತ್ತು. ರಾಮ ಭಕ್ತರ ನಾಡಲ್ಲಿ ರಾವಣ ಎಂದು ಕರೆಯಬಾರದಿತ್ತು‘ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT